ಬೆಂಗಳೂರು: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ದ ನಡೆದ ಮಳೆ ಬಾಧಿತ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐದು ವಿಕೆಟ್‌ಗಳ ಅಂತರದ ಸೋಲಿಗೆ ಶರಣಾಗಿದೆ.
ಈ ಸೋಲಿನೊಂದಿಗೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡವು ಕಳಪೆ ಸಾಧನೆಗೆ ಗುರಿಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನ ಅಂಗಳ ಚಿನ್ನಸ್ವಾಮಿಯಲ್ಲಿ 46ನೇ ಸೋಲನ್ನು ಕಂಡಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ನಿರ್ದಿಷ್ಟ ತಾಣವೊಂದರಲ್ಲಿ ಅತಿ ಹೆಚ್ಚು ಸೋಲಿಗೆ ಒಳಗಾದ ತಂಡವೆಂಬ ಅಪಖ್ಯಾತಿಗೆ ಒಳಗಾಗಿದೆ.
ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್, ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ 45 ಪಂದ್ಯಗಳಲ್ಲಿ ಸೋಲನ್ನು ಕಂಡಿತ್ತು. ಇನ್ನು ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಈಡನ್ ಗಾರ್ಡನ್ಸ್ ಮೈದಾನದಲ್ಲಿ 38 ಹಾಗೂ ಮುಂಬೈ ಇಂಡಿಯನ್ಸ್ ತಂಡವು ವಾಂಖೆಡೆ ಮೈದಾನದಲ್ಲಿ 34 ಪಂದ್ಯಗಳಲ್ಲಿ ಸೋಲನುಭವಿಸಿದೆ.
ಪ್ರಸಕ್ತ ಸಾಲಿನಲ್ಲಿ ತವರಿನ ಅಂಗಳವಾದ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಸತತ ಮೂರನೇ ಸೋಲನ್ನು ಕಂಡಿದೆ. ಅಲ್ಲದೆ ತವರಿನ ಮೈದಾನದಲ್ಲಿ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ಈ ಮೊದಲು ರಜತ್ ಪಾಟೀದಾರ್ ಬಳಗವು ಗುಜರಾತ್ ಟೈಟನ್ಸ್ ವಿರುದ್ಧ ಎಂಟು ವಿಕೆಟ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರು ವಿಕೆಟ್‌ಗಳ ಅಂತರದ ಸೋಲಿಗೆ ಗುರಿಯಾಗಿತ್ತು.
ಮಳೆಯಿಂದಾಗಿ 14 ಓವರ್‌ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಆರ್‌ಸಿಬಿ ಬ್ಯಾಟಿಂಗ್ ವೈಫಲ್ಯವನ್ನು ಕಂಡಿತ್ತು. 14 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 95 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಫಿಲ್ ಸಾಲ್ಟ್ (4), ವಿರಾಟ್ ಕೊಹ್ಲಿ (1), ಲಿಯಾಮ್ ಲಿವಿಂಗ್‌ಸ್ಟೋನ್ (4), ಜಿತೇಶ್ ಶರ್ಮಾ (2) ಹಾಗೂ ಕೃಣಾಲ್ ಪಾಂಡ್ಯ (1) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಈ ನಡುವೆ ದಿಟ್ಟ ಹೋರಾಟ ಪ್ರದರ್ಶಿಸಿದ ಟಿಮ್ ಡೇವಿಡ್, 26 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿ ಔಟಾಗದೆ ಉಳಿದರು. ನಾಯಕ ರಜತ್ ಪಾಟೀದಾರ್ 18 ಎಸೆತಗಳಲ್ಲಿ 23 ರನ್ (ತಲಾ ಒಂದು ಬೌಂಡರಿ, ಸಿಕ್ಸರ್) ಗಳಿಸಿದರು. ಪಂಜಾಬ್ ಪರ ಯಜುವೇಂದ್ರ ಚಾಹಲ್, ಹರಪ್ರೀತ್ ಬ್ರಾರ್, ಮಾರ್ಕೊ ಜಾನ್ಸೆನ್ ಹಾಗೂ ಅರ್ಷದೀಪ್ ಸಿಂಗ್ ತಲಾ ಎರಡು ವಿಕೆಟ್ ಗಳಿಸಿದರು.
ಈ ಗುರಿ ಬೆನ್ನಟ್ಟಿದ ಪಂಜಾಬ್ 12.1 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗೆಲುವು ದಾಖಲಿಸಿತು. ನೆಹಲ್ ವಧೇರಾ 19 ಎಸೆತಗಳಲ್ಲಿ ಅಜೇಯ 33 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪ್ರಿಯಾಂಶ್ ಆರ್ಯ (16), ಪ್ರಬ್‌ಸಿಮ್ರಾನ್ ಸಿಂಗ್ (13) ಹಾಗೂ ಜೋಶ್ ಇಂಗ್ಲಿಸ್ (14) ಉಪಯುಕ್ತ ಇನಿಂಗ್ಸ್ ಕಟ್ಟಿದರು.
ಆರ್‌ಸಿಬಿ ಪರ ಜೋಶ್ ಹ್ಯಾಜಲ್‌ವುಡ್ ಮೂರು ಹಾಗೂ ಭುವನೇಶ್ವರ್ ಕುಮಾರ್ ಎರಡು ವಿಕೆಟ್ ಗಳಿಸಿದರು.