image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೊಡವ ಕೌಟುಂಬಿಕ ಕ್ರಿಕೆಟ್ ನಲ್ಲಿ ನೆಲ್ಲೀರ, ಚೀಯಂಡೀರ, ಮೂಕಳೇರ, ನಾಯಕಂಡ ತಂಡಕ್ಕೆ ಜಯ...

ಕೊಡವ ಕೌಟುಂಬಿಕ ಕ್ರಿಕೆಟ್ ನಲ್ಲಿ ನೆಲ್ಲೀರ, ಚೀಯಂಡೀರ, ಮೂಕಳೇರ, ನಾಯಕಂಡ ತಂಡಕ್ಕೆ ಜಯ...

ಗೋಣಿಕೊಪ್ಪಲು: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನೆಲ್ಲೀರ ತಂಡ ಚಂಗುಲಂಡ ತಂಡದ ಎದುರು 34 ರನ್ ಗಳಿಂದ ಗೆಲುವು ದಾಖಲಿಸಿತು.ಹುದಿಕೇರಿ ಜನತಾ ಪ್ರೌಢಶಾಲೆ ಮೈದಾನದಲ್ಲಿ ನಡೆಯುತ್ತಿರುವ 'ಚೆಕ್ಕೇರ ಕಪ್' ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯ ಗುರುವಾರದ ಪಂದ್ಯದಲ್ಲಿ ಉತ್ತಮ ಆಟವಾಡಿದ ನೆಲ್ಲೀರ ತಂಡ ನಿಗದಿತ 6 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 78 ರನ್ ಗಳಿಸಿತು. ಗುರಿ ಬೆನ್ನತ್ತಿದ ಚಂಗುಲಂಡ ತಂಡ 6 ವಿಕೆಟ್ ಕಳೆದುಕೊಂಡು 44 ರನ್ ಗಳಿಸಿ ಸೋಲಪ್ಪಿತು. ಚಂಗುಲಂಡ ತಂಡದ ಅಯ್ಯಪ್ಪ ಪಂದ್ಯ ಪುರುಷ ಪ್ರಶಸ್ತಿ ಗಳಿಸಿದರು.

ಚೀಯಂಡೀರ ತಂಡ ಬಲ್ಲಾಡಿಚಂಡ ತಂಡವನ್ನು 23 ರನ್‌ಗಳಿಂದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.ಚೀಯಂಡೀರ ತಂಡದ ಬ್ಯಾಟ್ಸ್‌ಮನ್ ಸೂರಜ್ 10 ಬಾಲ್‌ಗಳಲ್ಲಿ ಗಳಿಸಿದ 27 ರನ್‌ಗಳಿಂದ ತಂಡ 6 ವಿಕೆಟ್ ನಷ್ಟಕ್ಕೆ 64 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾಯಿತು. ಬಳಿಕ ಬ್ಯಾಟಿಂಗ್‌ಗೆ ಇಳಿದ ಬಲ್ಲಾಡಿಚಂಡ ತಂಡ 7 ವಿಕೆಟ್ ಕಳೆದುಕೊಂಡು 41 ರನ್ ಗಳಿಸಿತು. ಬಲ್ಲಾಡಿಚಂಡ ತಂಡದ ಉತ್ತಪ್ಪ ಪಂದ್ಯಪುರುಷ ಪ್ರಶಸ್ತಿ ಪಡೆದರು.

ಮೂಕಳೇರ ತಂಡ ಚೀರಂಡ ತಂಡದ ವಿರುದ್ಧ 23 ರನ್ ಗಳಿಂದ ಜಯಸಾಧಿಸಿತು. ಮೂಕಳೇರ ತಂಡ ನೀಡಿದ 87 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನತ್ತಲಾಗದ ಚೀರಂಡ 3 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಲಷ್ಟೇ ಶಕ್ತವಾಯಿತು. ಮೂಕಳೇರ ತಂಡದ ಅಜಿತ್ 20 ಬಾಲ್‌ಗಳಲ್ಲಿ 42 ರನ್‌ ಗಳಿಸಿದರೆ ಮಿಲನ್ 22 ರನ್ ನೀಡಿ 2 ವಿಕೆಟ್ ಪಡೆದರು. ಚೀರಂಡ ತಂಡದ ಶರಣ್ ಅಯ್ಯಪ್ಪ ಪಂದ್ಯ ಪುರುಷ ಪ್ರಶಸ್ತಿ ಗಳಿಸಿದರು.

ನಾಯಕಂಡ ತಂಡ ಅರಮಣಮಾಡ ತಂಡದ ವಿರುದ್ಧ 10 ವಿಕೆಟ್ ಗಳಿಂದ ಸುಲಭ ಜಯಗಳಿಸಿತು. ಅರಮಣಮಾಡ ತಂಡ ನೀಡಿದ 49 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ ನಾಯಕಂಡ ತಂಡ ಕೇವಲ 2.2ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 51 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಕನ್ನಿಗಂಡ ತಂಡ ಪೊನ್ನಿಮಾಡ ತಂಡದ ಎದುರು 9 ವಿಕೆಟ್ಗಳಿಂದ ಗೆಲುವು ದಾಖಲಿಸಿತು. ಪೊನ್ನಿಮಾಡ ತಂಡದ 48 ರನ್ ಗಳ ಗುರಿಯನ್ನು ಸುಲಭವಾಗಿ ದಾಟಿದ ಕನ್ನಿಗಂಡ 1ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿತು. ಪೊನ್ನಿಮಾಡ ತಂಡ ರತನ್ ಪಂದ್ಯಪುರುಷ ಪ್ರಶಸ್ತಿ ಗಳಿಸಿದರು.

ಮುಕ್ಕಾಟೀರ (ಮಾದಾಪುರ) ತಂಡ ಜಮ್ಮಡ (ಅರುವತ್ತೊಕ್ಕಲು) ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿತು. ಜಮ್ಮಡ ತಂಡ ಉತ್ತಮ ಬ್ಯಾಟಿಂಗ್ ನಡೆಸಿ 6 ವಿಕೆಟ್ ನಷ್ಟಕ್ಕೆ 84 ರನ್ ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತ್ತು. ಬಳಿಕ ಬ್ಯಾಟಿಂಗ್‌ ನಡೆಸಿದ ಮುಕ್ಕಾಟೀರ ತಂಡದ ಬ್ಯಾಟ್ಸ್‌ಮನ್‌ಗಳು ಎಚ್ಚರಿಕೆಯ ಆಟವಾಡಿ 3 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿದರು.

ದಿನದ ಕೊನೆಯ ಪಂದ್ಯದಲ್ಲಿ ಪರುವಂಡ ತಂಡ ಮುಕ್ಕಾಟೀರ (ಕುಂಜಲಗೇರಿ) ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.

Category
ಕರಾವಳಿ ತರಂಗಿಣಿ