ಮುಂಬೈ : ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ನನಲ್ಲಿ ಸತತ ನಾಲ್ಕನೇ ಸೋಲು ಕಂಡಿದೆ. ಮಂಗಳವಾರ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಸಿಎಸ್ಕೆ ತಂಡ 18 ರನ್‌ಗಳಿಂದ ಸೋಲನುಭವಿಸಿದ್ದು, ಟೂರ್ನಿಯಲ್ಲೇ ಚೆನ್ನೈಗೆ ಇದು ಸತತ ನಾಲ್ಕನೇ ಸೋಲಾಗಿದೆ. ಅಂಕಪಟ್ಟಿಯಲ್ಲೂ 9ನೇ ಸ್ಥಾನಕ್ಕೆ ಕುಸಿದಿದೆ.
ಮುಲ್ಲನ್‌ಪುರದ ಮಹಾರಾಜ ಯಾದವೇಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ 220 ರನ್‌ಗಳ ಬೃಹತ್ ಗುರಿಯನ್ನು ಭೇದಿಸಲು ಮುಂದಾದ ಚೆನ್ನೈ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 201 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಚೆನ್ನೈನ ಪರ ಡೆವೊನ್ ಕಾನ್ವೇ (69) ಹೈಸ್ಕೋರರ್ ಎನಿಸಿಕೊಂಡರೇ, ಆರಂಭಿಕ ಬ್ಯಾಟರ್ ರಚಿನ್ ರವೀಂದ್ರ (36), ಶಿವಂ ದುಬೆ (42) ಎಮ್ಎಸ್ ಧೋನಿ (27) ವೇಗದ ಇನ್ನಿಂಗ್ಸ್ ಆಡಿದರು ತಂಡಕ್ಕೆ ಗೆಲುವು ದಕ್ಕಲಿಲ್ಲ.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು. ಆರಂಭಿಕ ಬ್ಯಾಟರ್ ಆಗಿ ಬಂದ ಪ್ರಿಯಾಂಶ್ ಆರ್ಯ ಸ್ಫೋಟಕ ಬ್ಯಾಟಿಂಗ್ ಮೂಲಕ ಕೇವಲ 39 ಎಸೆತ ಶತಕ ಬಾರಿಸಿದರು. ಪ್ರಿಯಾಂಶ್ ಹೊರತುಪಡಿಸಿ, ಶಶಾಂಕ್ ಸಿಂಗ್ (52) ಅರ್ಧಶತಕ ಸಿಡಿಸಿದರೆ, ಮಾರ್ಕೊ ಜಾನ್ಸನ್ 34 ರನ್ ಗಳಿಸಿ ಅಜೇಯರಾಗಿ ಉಳಿದರು. ಆದರೆ, ಪಂಜಾಬ್ನ ಐವರು ಬ್ಯಾಟರ್ಗಳು ಸಿಂಗಲ್ ಡಿಜೆಟ್ಗೆ ಪೆವಿಲಿಯನ್ ಸೇರಿದರು. ಚನ್ನೈ ಪರ ಖಲೀಲ್ ಅಹ್ಮದ್ ಮತ್ತು ರವಿಚಂದ್ರನ್ ಅಶ್ವಿನ್ ತಲಾ 2 ವಿಕೆಟ್ ಪಡೆದರು. ಶತಕ ಬಾರಿಸಿ ಚೆನ್ನೈ ಸೋಲಿಗೆ ಕಾರಣರಾದ ಪ್ರೀಯಾಂಶ್ ಆರ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.