ಮುಂಬೈ : ಸನ್‌ರೈಸರ್ಸ್ ಹೈದರಾಬಾದ್ ತಂಡ ಸತತ ಸೋಲುಗಳಿಂದ ಕಂಗೆಟ್ಟಿದೆ. ಭಾನುವಾರ ತವರಿನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ದ ಪಂದ್ಯದಲ್ಲೂ ಹೀನಾಯವಾಗಿ ಸೋಲನುಭವಿಸಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಹೈದರಾಬಾದ್ ನೀಡಿದ್ದ 153 ರನ್ಗಳ ಗುರಿಯನ್ನು ಬೆನ್ನತ್ತಿದ ಗುಜರಾತ್ ತಂಡ 16.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಸೇರಿತು. ನಾಯಕ ಶುಭಮನ್ ಗಿಲ್ (61*) ಅರ್ಧಶತಕ, ವಾಷಿಂಗ್ಟನ್ ಸುಂದರ್ (49) ಮತ್ತು ರುದರ್ಫೋರ್ಡ್ (35*) ಬ್ಯಾಟಿಂಗ್ ಸಹಾಯದಿಂದ ಸುಲಭವಾಗಿ ಗೆಲುವು ಸಾಧಿಸಿದೆ. ಹೈದರಾಬಾದ್ ಪರ ಮೊಹಮ್ಮದ್ ಶಮಿ 2 ವಿಕೆಟ್ ಪಡೆದರೆ, ನಾಯಕ ಪ್ಯಾಟ್ ಕಮ್ಮಿನ್ಸ್ ಒಂದು ವಿಕೆಟ್ ಪಡೆದರು.
ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು ಸನ್‌ರೈಸರ್ಸ್ ತಂಡಕ್ಕೆ ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆದರೆ ತವರಿನಲ್ಲಿ ಹೈದರಾಬಾದ್ ತಂಡ ಮತ್ತೆ ಅಬ್ಬರಿಸುತ್ತೆ ಎಂಬ ನಿರೀಕ್ಷೆಯಲ್ಲಿದ್ದ ಫ್ಯಾನ್ಸ್ಗಳಿಗೆ ಬ್ಯಾಟರ್ಗಳು ನಿರಾಸೆ ಮೂಡಿಸಿದರು.
ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 120 ರನ್‌ಗಳಿಗೆ ಆಲೌಟ್ ಆಗಿದ್ದ ಹೈದರಾಬಾದ್, ಈ ಪಂದ್ಯದಲ್ಲಿ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 152 ರನ್ ಮಾತ್ರ ಗಳಿಸಿತು. ಆರಂಭಿಕ ಬ್ಯಾಟಗರ್ಳಾದ ಅಭಿಷೇಕ್ ಶರ್ಮಾ (18), ಟ್ರಾವಿಸ್ ಹೆಡ್ (8) ಮತ್ತು ಇಶನ್ ಕಿಶನ್ (17) ಮತ್ತೊಮ್ಮೆ ಕೈಕೊಟ್ಟರು.
ಮಧ್ಯಮ ಕ್ರಮಾಂಕದಲ್ಲಿ ನಿತೀಶ್ ಕುಮಾರ್ ರೆಡ್ಡಿ (31) ಮತ್ತು ಹೆನ್ರಿಕ್ ಕ್ಲಾಸೆನ್ (27) ಐವತ್ತು ರನ್ ಜೊತೆಯಾಟವಾಡಿದರು. ಕೊನೆಯಲ್ಲಿ ಪ್ಯಾಟ್ ಕಮಿನ್ಸ್ 9 ಎಸೆತಗಳಲ್ಲಿ 22 ರನ್ ಸಿಡಿಸಿದ್ದರಿಂಧ ತಂಡದ ಸ್ಕೋರ್ 150ರ ಗಡಿ ತಲುಪಲು ಸಾಧ್ಯವಾಯ್ತು.
ಗುಜರಾತ್ ಪರ ಮೊಹಮ್ಮದ್ ಸಿರಾಜ್ 4 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ ಮತ್ತು ಸಾಯಿ ಕಿಶೋರ್ ತಲಾ 2 ವಿಕೆಟ್ ಉರುಳಿಸಿದರು.