ಮುಂಬೈ :ಐಪಿಎಲ್ನ 7ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಗಳು ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ LSG ತಂಡ ಭರ್ಜರಿ ಗೆಲುವು ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಖಾತೆ ತೆರೆದಿದೆ.
ಗುರುವಾರ ನಡೆದ ರಣರೋಚಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ತಂಡ 9 ವಿಕೆಟ್ ನಷ್ಟಕ್ಕೆ 190 ರನ್ಗಳನ್ನು ಕಲೆಹಾಕಿತು. ಕಳೆದ ಆವೃತ್ತಿಯಲ್ಲಿ ಇದೇ ತಂಡದದೆದು ಅಬ್ಬರಿಸಿದ್ದ ಹೈದರಾಬಾದ್ ಈ ಆವೃತ್ತಿಯಲ್ಲೂ LSG ವಿರುದ್ಧ ಸಿಡಿದೆದ್ದು ಬೃಹತ್ ಸ್ಕೋರ್ಗಳಿಸುತ್ತದೆ ಎಂದು ಫ್ಯಾನ್ಸ್ ಲೆಕ್ಕಾಚಾರ ಹಾಕಿದ್ದರು. ಆದರೆ ಆ ಲೆಕ್ಕಾಚಾರ ಪಂತ್ ಪಡೆ ತಲೆಕೆಳಗಾಗಿ ಮಾಡಿದೆ.
ಪವರ್ ಪ್ಲೇನಲ್ಲೇ ಪವರ್ ಹಿಟ್ಟರ್ಗಳನ್ನು ಔಟ್ ಮಾಡುವಲ್ಲಿ ಲಕ್ನೋ ಬೌಲರ್ ಶಾರ್ದೂಲ್ ಠಾಕೂರ್ ಯಶಸ್ವಿ ಆದರು. ಆರಂಭಿಕ ಬ್ಯಾಟರ್ ಅಭಿಶೇಕ್ ಶರ್ಮಾ 6 ರನ್ ಗಳಿಸಿ ಪೆವಿಲಯನ್ ಸೇರಿದರು. ಬಳಿಕ ಬಂದ ಇಶಾನ್ ಕಿಶನ್ ಶೂನ್ಯಕ್ಕೆ ಪೆವಿಲಿಯನ್ ದಾರಿ ಹಿಡಿದರು. ಇದರಿಂದಾಗಿ ತಂಡ ಆರಂಭದಲ್ಲಿ 15 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಬಳಿಕ ಹೆಡ್ ಕೆಲಹೊತ್ತು ಅಬ್ಬರಿಸಿದರೂ ಹೆಚ್ಚು ಹೊತ್ತು ಉಳಿಯಲಿಲ್ಲ 47 ರನ್ ಗಳಿಸಿ ನಿರ್ಗಮಿಸಿದರು.
ಉಳಿದಂತೆ ನಿತೀಶ್ ಕುಮಾರ್ ರೆಡ್ಡಿ (32), ಕ್ಲಾಸೇನ್ (26), ಅನಿಕೇತ್ ವರ್ಮಾ (36), ಪ್ಯಾಟ್ ಕಮಿನ್ಸ್ (18), ಹರ್ಷಲ್ ಪಟೇಲ್ (12) ರನ್ ಕೊಡುಗೆ ನೀಡಿದ್ದರಿಂದ ಹೈದರಾಬದ್ ತಂಡ 190 ರನ್ಗಳಿಗೆ ತೃಪ್ತಿಪಟ್ಟಿತು.
ಈ ಗುರಿನ್ನು ಬೆನ್ನತ್ತಿದ ಲಕ್ನೋ ಪರ ಮಿಚೆಲ್ ಮಾರ್ಷ್ (52) ಮತ್ತೊಮ್ಮೆ ಘರ್ಜಿಸಿ ಅರ್ಧಶತಕ ಪೂರ್ಣಗೊಳಿಸಿದರೆ, ನಿಕೋಲಸ್ ಪೂರನ್ ಬಿರುಗಾಳಿ ಬ್ಯಾಟಿಂಗ್ ಮೂಲಕ ಕೇವಲ 26 ಎಸೆತಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್ ಸಹಾಯದಿಂದ 70 ರನ್ ಚಚ್ಚಿ ಹೈದರಾಬಾದ್ ತಂಡವನ್ನು ಸೋಲಿನ ಸುಳಿಗೆ ಸಿಲುಕಿಸಿ ನಿರ್ಗಮಿಸಿದರು. ಕೊನೆಯಲ್ಲಿ ಮಿಲ್ಲರ್ (13*) ಮತ್ತು 9ಅಬದುಲ್ ಸಮದ್ (22*) ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. ಇದರೊಂದಿಗೆ ಲಕ್ನೋ ತಂಡ ಗೆಲುವಿನ ಖಾತೆಯನ್ನು ತೆರೆದಿದೆ.