ಬೆಂಗಳೂರು: TCS ವರ್ಲ್ಡ್ 10K ಮ್ಯಾರಥಾನ್‌ನ 17ನೇ ಆವೃತ್ತಿಗೆ ಬೆಂಗಳೂರು ಸಜ್ಜಾಗಿದೆ. 2,10,000 ಯುಎಸ್ ಡಾಲರ್ ಬಹುಮಾನದ ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೇಬಲ್ ರೋಡ್ ರೇಸ್ ಏಪ್ರಿಲ್ 27ರಂದು ಭಾನುವಾರ ಬೆಂಗಳೂರಲ್ಲಿ ನಡೆಯಲಿದೆ. #ಎಂದೆಂದಿಗೂ ಬೆಂಗಳೂರು - ಫಾರ್ ಎವರ್ ಬೆಂಗಳೂರು ಧ್ಯೇಯವಾಕ್ಯದಡಿ ನಡೆಯಲಿರುವ ಈ ಓಟವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಪಟುಗಳು, ಹವ್ಯಾಸಿ ಓಟಗಾರರನ್ನ ಒಟ್ಟುಗೂಡಿಸುತ್ತಿದೆ.
5K ಮತ್ತು 10K ಓಟದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಉಗಾಂಡದ ಅಥ್ಲೀಟ್ ಜೋಶುವಾ ಕಿಪ್ರುಯಿ ಚೆಪ್ಟೆಗಿ ಭಾಗವಹಿಸಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಲಾಂಗ್ ರನ್ನಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿರುವ ಮೂರು ಬಾರಿಯ ಒಲಿಂಪಿಯನ್ ಚೆಪ್ಟೆಗಿ ಅವರು 11 ವರ್ಷಗಳ ನಂತರ TCS 10K ಬೆಂಗಳೂರು ಮ್ಯಾರಥಾನ್‌ಗೆ ಮರಳುತ್ತಿದ್ದಾರೆ. ಈ ಹಿಂದೆ 2014ರಲ್ಲಿ TCS 10K ಮ್ಯಾರಥಾನ್‌ನಲ್ಲಿ ಚೆಪ್ಟೆಗಿ 2ನೇ ಸ್ಥಾನ ಗಳಿಸಿದ್ದರು.
ಸ್ಟಾರ್ ಒಲಿಂಪಿಯನ್ ಓಟಗಾರ ಚೆಪ್ಟೆಗಿ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 10 ಸಾವಿರ ಮೀಟರ್ ಓಟದಲ್ಲಿ ಚಿನ್ನ ಗೆಲ್ಲುವ ಮೂಲಕ ತಮ್ಮ ಪರಂಪರೆಯನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 5 ಸಾವಿರ ಮೀಟರ್ ಓಟದಲ್ಲಿ ಚಿನ್ನ ಮತ್ತು 10 ಸಾವಿರ ಮೀಟರ್ ಓಟದಲ್ಲಿ ಬೆಳ್ಳಿ ಗೆದ್ದಿದ್ದರು. ಇನ್ನು ಇಂಡಿಯನ್ ಚಾಲೆಂಜ್ ವಿಭಾಗವನ್ನ ಹಾಲಿ ಚಾಂಪಿಯನ್ ಮತ್ತು ಕೂಟದ ದಾಖಲೆಗಳ ಒಡೆಯರಾದ ಕಿರಣ್ ಮ್ಹಾತ್ರೆ ಮತ್ತು ಸಂಜೀವನಿ ಜಾಧವ್ ಮುನ್ನಡೆಸಲಿದ್ದಾರೆ.
ಭಾರತೀಯ ಪುರುಷರ ವಿಭಾಗದಲ್ಲಿ 10 ಸಾವಿರ ಮೀಟರ್ ರಾಷ್ಟ್ರೀಯ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತ ಮತ್ತು TCS ವರ್ಲ್ಡ್ 10K ಹಾಲಿ ಚಾಂಪಿಯನ್ ಕಿರಣ್ ಮಾತ್ರೆ ಅವರು ಎಸಿಕ್ಸ್ ಅಥ್ಲೀಟ್ ಹಾಗೂ ಈ ಬಾರಿ ಪಾದಾರ್ಪಣೆಗೈಯ್ಯುತ್ತಿರುವ ಸಾವನ್ ಬರ್ವಾಲ್ ಅವರಿಂದ ಪ್ರಬಲ ಸವಾಲನ್ನು ಎದುರಿಸಲಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸಾವನ್ 10 ಸಾವಿರ ಮೀಟರ್ ವಿಭಾಗದಲ್ಲಿ ಚಿನ್ನವನ್ನು ಗೆದ್ದಿದ್ದಾರೆ. ಹಾಗೂ ಟಿಎಂಎಂ - 2025 ಆವೃತ್ತಿಯಲ್ಲಿ ಹಾಫ್ ಮ್ಯಾರಥಾನ್, VDHM - 2024 ಗೆಲ್ಲುವುದರ ಜತೆಗೆ TSW 25K ಕೋಲ್ಕತ್ತಾ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದರು.
ಮಹಿಳೆಯರ ವಿಭಾಗದಲ್ಲಿ 10 ಸಾವಿರ ಮೀಟರ್ ವಿಭಾಗದಲ್ಲಿ ನ್ಯಾಷನಲ್ ಗೇಮ್ಸ್ ಚಿನ್ನದ ಪದಕ ವಿಜೇತೆ ಹಾಗೂ TCS 10K ಹಾಲಿ ಚಾಂಪಿಯನ್ ಸಂಜೀವನಿ ಜಾಧವ್ ಪ್ರಮುಖ ಆಕರ್ಷಣೆಯಾಗಿದ್ದಾರೆ. ಸಂಜೀವನಿ ಅವರಿಗೆ ಬೆಂಗಳೂರಿನಲ್ಲಿ ಮೂರು ಬಾರಿ ಚಾಂಪಿಯನ್ ಆಗಿರುವ ಲಿಲಿ ದಾಸ್ ಪ್ರತಿಸ್ಪರ್ಧೆ ನೀಡಲಿದ್ದಾರೆ. ಲಿಲಿ ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದರು ಮತ್ತು VDHM 2024 ಆವೃತ್ತಿ ಮತ್ತು TSW 25K ಕೋಲ್ಕತ್ತಾ 2024 ಆವೃತ್ತಿಯನ್ನು ಜಯಿಸಿದ್ದಾರೆ.