ಮುಂಬೈ : ದೇಶೀಯ ಕ್ರಿಕೆಟ್ ಆಡದ ಕಾರಣ ಕಳೆದ ವರ್ಷ ಬಿಸಿಸಿಐ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ಕೇಂದ್ರ ಒಪ್ಪಂದದಿಂದ ಕೈಬಿಟ್ಟಿತ್ತು.
ಇತ್ತೀಚಿನ ದಿನಗಳಲ್ಲಿ ಶ್ರೇಯಸ್ ದೇಶೀಯ ಟೂರ್ನಿಗಳು ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ 243 ರನ್ ಗಳಿಸುವ ಮೂಲಕ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದು, ಈ ಹಿನ್ನೆಲೆ ಬಿಸಿಸಿಐ ಶ್ರೇಯಸ್ ಅವರನ್ನು ಮತ್ತೆ ಒಪ್ಪಂದದ ಪಟ್ಟಿಗೆ ಸೇರಿಸುವ ಸಾಧ್ಯತೆಗಳು ದಟ್ಟವಾಗಿವೆ.
ಬಿಸಿಸಿಐ ಕೇಂದ್ರ ಒಪ್ಪಂದದ ಪಟ್ಟಿಯಲ್ಲಿ ಸ್ಥಾನ ಪಡೆಯಲು, ಯಾವುದೇ ಆಟಗಾರ ಒಂದು ನಿರ್ದಿಷ್ಟ ಕ್ಯಾಲೆಂಡರ್ ವರ್ಷದಲ್ಲಿ ಮೂರು ಟೆಸ್ಟ್ ಪಂದ್ಯಗಳು ಅಥವಾ 8 ಏಕದಿನ ಪಂದ್ಯಗಳು ಅಥವಾ 10 ಟಿ-20 ಪಂದ್ಯಗಳನ್ನು ಆಡಿರಬೇಕು. ಶ್ರೇಯಸ್ ಅಯ್ಯರ್ ಈ ಋತುವಿನಲ್ಲಿ 11 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ವಿರಾಟ್, ರೋಹಿತ್ಗೆ ಡಿಮೋಷನ್: ಬಿಸಿಸಿಐ ಸೋಮವಾರ ಭಾರತೀಯ ಮಹಿಳಾ ತಂಡದ ಕೇಂದ್ರ ಒಪ್ಪಂದದ ಪಟ್ಟಿ ಪ್ರಕಟಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಟೀಮ್ ಇಂಡಿಯಾ ಪುರುಷರ ಪಟ್ಟಿಯನ್ನು ಘೋಷಿಸುವ ಸಾಧ್ಯತೆಯಿದೆ. A+ ವರ್ಗದಲ್ಲಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20ಗೆ ವಿದಾಯ ಹೇಳಿದ್ದಾರೆ. ಆದ ಕಾರಣ ಈ ಬಾರಿ ಅವರು A+ ವಿಭಾಗದಿಂದ ಕೆಳಗಿಳಿಯಲಿದ್ದಾರೆ. ಬುಮ್ರಾ ಎ+ ವಿಭಾಗದಲ್ಲಿ ಮುಂದುವರಿಸುವ ಸಾಧ್ಯತೆ ಇದೆ ಎಂಬ ವರದಿಗಳಿವೆ.
ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರನ್ನು ಬಿ ಗ್ರೇಡ್ ಒಪ್ಪಂದದಿಂದ ಬಡ್ತಿ ನೀಡಲಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ. ಜೊತೆಗೆ ಈ ಕ್ಯಾಲೆಂಡರ್ ವರ್ಷದಲ್ಲಿ 7 ಟೆಸ್ಟ್ ಪಂದ್ಯಗಳನ್ನು ಆಡಿರುವ ವೇಗಿ ಆಕಾಶ್ ದೀಪ್ ಮತ್ತು 3 ಪಂದ್ಯಗಳನ್ನು ಆಡಿರುವ ಸರ್ಫರಾಜ್ ಖಾನ್ ಗ್ರೂಪ್ ಸಿ ನಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.