image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಾಜಿ ಸಿಎಂ ದಿವಂಗತ ಎಸ್​.ಎಂ.ಕೃಷ್ಣ ಸ್ಮರಣಾರ್ಥ ಕೆಎಸ್​ಎಲ್​ಟಿಎ ಟೆನ್ನಿಸ್ ಪಂದ್ಯಾವಳಿ ಆಯೋಜನೆ

ಮಾಜಿ ಸಿಎಂ ದಿವಂಗತ ಎಸ್​.ಎಂ.ಕೃಷ್ಣ ಸ್ಮರಣಾರ್ಥ ಕೆಎಸ್​ಎಲ್​ಟಿಎ ಟೆನ್ನಿಸ್ ಪಂದ್ಯಾವಳಿ ಆಯೋಜನೆ

ಬೆಂಗಳೂರು: ದಶಕಗಳ ಕಾಲ ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್ ​​(KSLTA) ಅಧ್ಯಕ್ಷರಾಗಿ ಮುನ್ನಡೆಸಿದ, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ.ಕೃಷ್ಣ ಅವರ ಸ್ಮರಣಾರ್ಥ ಟೆನ್ನಿಸ್ ಪಂದ್ಯಾವಳಿ ಆಯೋಜಿಸುವುದಾಗಿ ಕೆಎಸ್ಎಲ್‌ಟಿಎ ಘೋಷಿಸಿದೆ.

ITF ಪುರುಷರ M25 ಪಂದ್ಯಾವಳಿಯು ಮಾರ್ಚ್ 31ರಿಂದ ಏಪ್ರಿಲ್ 6ರ ವರೆಗೆ ಕೆಎಸ್ಎಲ್‌ಟಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಜೇತರು 30,000 ಯುಎಸ್ ಡಾಲರ್ ಬಹುಮಾನ ಪಡೆಯಲಿದ್ದಾರೆ. ಟೂರ್ನಿಯ ಅರ್ಹತಾ ಸುತ್ತುಗಳು ಮಾರ್ಚ್ 29 ಮತ್ತು 30ರಂದು ನಡೆಯಲಿದ್ದು, ಮಾರ್ಚ್ 31ರಿಂದ ಮುಖ್ಯ ಸುತ್ತಿನ ಪಂದ್ಯಗಳು ಪ್ರಾರಂಭವಾಗಲಿವೆ. ಸಿಂಗಲ್ಸ್ ಫೈನಲ್‌ಗಳು ಏಪ್ರಿಲ್ 6ರಂದು ನಡೆಯಲಿವೆ. ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿರಲಿದೆ.

ಟೆನ್ನಿಸ್ ಪ್ರೇಮಿಯಾಗಿದ್ದ ಎಸ್.ಎಂ.ಕೃಷ್ಣ ಅವರು 1999ರಿಂದ 2020ರ ವರೆಗೆ ಕೆಎಸ್ಎಲ್‌ಟಿಎ ಅಧ್ಯಕ್ಷರಾಗಿ ಹಾಗೂ 2015ರಿಂದ 2023ರ ವರೆಗೆ ಆಲ್ ಇಂಡಿಯಾ ಟೆನ್ನಿಸ್ ಅಸೋಸಿಯೇಷನ್ (AITA) ಅಧ್ಯಕ್ಷರಾಗಿದ್ದರು. ಬೆಂಗಳೂರಿನ ಹೃದಯ ಭಾಗದಲ್ಲಿ ಕೆಎಸ್ಎಲ್‌ಟಿಎದ ಅತ್ಯಾಧುನಿಕ ಟೆನ್ನಿಸ್ ಕ್ರೀಡಾಂಗಣದ ಸೌಲಭ್ಯ ನವೀಕರಿಸುವಲ್ಲಿ ಕೃಷ್ಣ ಅವರು ಪ್ರಮುಖ ಪಾತ್ರ ವಹಿಸಿದ್ದರು. ಲೆಜೆಂಡ್ಸ್ ಟೂರ್, ವರ್ಲ್ಡ್ ಡಬಲ್ಸ್ ಚಾಂಪಿಯನ್‌ಶಿಪ್ಸ್ ಸೇರಿದಂತೆ ವಿಶ್ವ ವಿಖ್ಯಾತ ಆಟಗಾರ್ತಿಯರಾದ ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್ ಸಹೋದರಿಯರನ್ನ ಸೆಳೆದ WTA ಇಂಡಿಯನ್ ಓಪನ್‌ನಂಥಹ ವಿಶ್ವ ದರ್ಜೆಯ ಪಂದ್ಯಾವಳಿಗಳನ್ನು ಬೆಂಗಳೂರಿಗೆ ತರುವಲ್ಲಿ ಕೃಷ್ಣ ಅವರ ಪಾತ್ರ ಪ್ರಮುಖವಾಗಿತ್ತು.

ಟೆನ್ನಿಸ್ ಕುರಿತು ಕೃಷ್ಣ ಅವರ ದೂರದೃಷ್ಟಿಯಿಂದ ಇಂದು ಐಟಿಎಫ್ ಪಂದ್ಯಾವಳಿಗಳು 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಡೆಯುತ್ತಿವೆ. ಐಟಿಎಫ್ ಮತ್ತು ಎಟಿಪಿ ಚಾಲೆಂಜರ್ ಈವೆಂಟ್‌ಗಳು ಸೇರಿದಂತೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಬಹುದಾದ ಮೂಲಸೌಕರ್ಯವನ್ನ ಕರ್ನಾಟಕ ಹೊಂದಲು ಸಾಧ್ಯವಾಗಿದೆ.

ಟೂರ್ನಿಯ ಕುರಿತು ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ''ಎಸ್.ಎಂ.ಕೃಷ್ಣ ಅವರು ಸ್ವತಃ ಟೆನ್ನಿಸ್ ಪ್ರಿಯರಾಗಿದ್ದರು. ಕರ್ನಾಟಕದಲ್ಲಿ ಟೆನ್ನಿಸ್ ಬೆಳೆಸಲು ಮತ್ತು 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅವರು ಬಯಸಿದ್ದರು. ಮುಖ್ಯಮಂತ್ರಿಯಾಗಿದ್ದಾಗ ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ, ಅವರು ಪ್ರತಿದಿನವೂ ಟೆನ್ನಿಸ್ ಆಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದರು. ಕ್ರೀಡೆಯ ಮೇಲಿನ ಅವರ ಪ್ರೀತಿ ಮತ್ತು ಫಿಟ್ ಆಗಿರಲು ಅವರು ಉತ್ಸಾಹ ಹೊಂದಿದ್ದರು. ಪ್ರಿಯಾಂಕ್ ಖರ್ಗೆಯವರು ಮತ್ತು ಕೆಎಸ್ಎಲ್‌ಟಿಎ ಯುವ ಆಡಳಿತಗಾರರು ಕೃಷ್ಣ ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಪಂದ್ಯಾವಳಿಯನ್ನು ಸುಗಮ ಮತ್ತು ವೃತ್ತಿಪರ ರೀತಿಯಲ್ಲಿ ನಡೆಸಲು ಅಗತ್ಯವಿರುವ ಎಲ್ಲಾ ರೀತಿಯ ಬೆಂಬಲವನ್ನು ಕರ್ನಾಟಕ ಸರ್ಕಾರ ನೀಡುತ್ತದೆ'' ಎಂದಿದ್ದಾರೆ.

Category
ಕರಾವಳಿ ತರಂಗಿಣಿ