ಚೆನ್ನೈ: ರಚಿನ್ ರವೀಂದ್ರ ಮತ್ತು ರುತುರಾಜ್ ಗಾಯಕ್ವಾಡ್ ಅವರ ಭರ್ಜರಿ ಬ್ಯಾಟಿಂಗ್ ಮತ್ತು ನೂರ್ ಅಹಮದ್ ಹಾಗೂ ಖಲೀಲ್ ಅಹಮದ್ ಮಾರಕ ಬೌಲಿಂಗ್ ದಾಳಿಯಿಂದಾಗಿ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಜಯ ಸಾಧಿಸಿತು. ಈ ಮೂಲಕ ಪ್ರಸಕ್ತ ಐಪಿಎಲ್ನಲ್ಲಿ ಚೆನ್ನೈ ತಂಡ ಶುಭಾರಂಭ ಮಾಡಿತು.
ಟಾಸ್ ಗೆದ್ದ ಚೆನ್ನೈ, ಮುಂಬೈ ತಂಡಕ್ಕೆ ಮೊದಲು ಬ್ಯಾಟಿಂಗ್ ಅವಕಾಶ ನೀಡಿತು. ಚೆನ್ನೈ ಮಾರಕ ಬೌಲಿಂಗ್ ದಾಳಿಯಿಂದಾಗಿ ಮುಂಬೈ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿ ಸಾಧಾರಣ ಮೊತ್ತ ಕಲೆ ಹಾಕಿತು.
ಆರಂಭಿಕ ಬ್ಯಾಟ್ಸಮನ್ ರೋಹಿತ್ ಶರ್ಮಾ ಶೂನ್ಯಕ್ಕೆ ಔಟಾನಿ ನಿರಾಸೆ ಮೂಡಿಸಿದರು. ಇನ್ನು ರಿಕಿಲ್ಟನ್ (13), ಬಳಿಕ ಬಂದ ವಿಲ್ ಜಾಕ್ಸ್ (11) ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ನಾಯಕ ಸೂರ್ಯ ಕುಮಾರ್ 29 ರನ್ ಗಳಿಸಿ ತಂಡದ ಸ್ಕೋರ್ ಹೆಚ್ಚಿಸುವ ಭರವಸೆ ಮೂಡಿಸಿದ್ದರು. ಆದರೆ ಧೋನಿಯ ಶರವೇಗದ ಸ್ಟಂಪಿಂಗ್ನಿಂದ ಸೂರ್ಯ ಪೆವಿಲಿಯನ್ ಸೇರಿದರು. ತಿಲಕ್ ವರ್ಮಾ (31) ಮತ್ತು ಡಿ ಚಾಹರ್ (28) ರನ್ ಬಾರಿಸಿದ್ದರಿಂದ ಮುಂಬೈ 155 ರನ್ಗಳ ಗುರಿ ನೀಡಿತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಚೆನ್ನೈ ತಂಡ, ಆರಂಭದಲ್ಲಿ ರಾಹುಲ್ ತ್ರಿಪಾಠಿ ವಿಕೆಟ್ ಬೇಗ ಕಳೆದುಕೊಂಡರೂ ರಚಿನ್ ರವೀಂದ್ರ (65) ಮತ್ತು ನಾಯಕ ರುತುರಾಜ್ ಗಾಯಕ್ವಾಡ್ (53) ಜೊತೆಯಾಟ ಜಯಕ್ಕೆ ಉತ್ತಮ ಅಡಿಪಾಯ ಹಾಕಿತು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಶಿವಂ ದುಬೆ (9), ದೀಪಕ್ ಹೂಡಾ (3), ಸ್ಯಾಮ್ ಕರನ್ (4) ಬಂದಷ್ಟೇ ವೇಗವಾಗಿ ಔಟಾಗಿದ್ದರಿಂದ ತಂಡಕ್ಕೆ ಸೋಲಿನ ಭೀತಿ ಎದುರಾಗಿತ್ತು. ಆದರೆ ಆರಂಭಿಕರಾಗಿ ಆಗಮಿಸಿದ್ದ ರಚಿನ್ ರವೀಂದ್ರ ಭದ್ರವಾಗಿ ನಿಂತಿದ್ದರು. ಕೊನೆಯಲ್ಲಿ ಜಡೇಜಾ 17 ರನ್ ಬಾರಿಸಿ ತಂಡವನ್ನು ಗೆಲುವಿನ ದಂಡಕ್ಕೆ ಸೇರಿಸಿದರು.