ನವದೆಹಲಿ : 12 ವರ್ಷಗಳ ಬಳಿಕ ಭಾರತ ತಂಡ ಇತ್ತೀಚೆಗೆ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಭಾರತ ಟ್ರೋಫಿಗೆ ಮುತ್ತಿಕ್ಕಿದೆ. ಇದೀಗ ಭಾರತ ತಂಡದ ಅತ್ಯುತ್ತಮ ಪ್ರದರ್ಶನಕ್ಕಾಗಿ ಬಿಸಿಸಿಐ ಭಾರಿ ಮೊತ್ತದ ಬಹುಮಾನವನ್ನು ಘೋಷಣೆ ಮಾಡಿದ್ದು ಎಲ್ಲರ ಹುಬ್ಬೆರಿಸುವಂತೆ ಮಾಡಿದೆ.
"ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಪಂದ್ಯಾವಳಿಯುದ್ದಕ್ಕೂ ಪ್ರಾಬಲ್ಯ ಸಾಧಿಸಿತು. ಒಂದೇ ಒಂದು ಸೋಲು ಕಾಣದೆ ಅಜೇಯವಾಗಿ ಕಪ್ ಗೆದ್ದುಕೊಂಡಿತು. ಬಾಂಗ್ಲಾದೇಶ ವಿರುದ್ಧದ ಗೆಲುವಿನೊಂದಿಗೆ ಟೂರ್ನಿ ಬೇಟೆ ಆಟರಂಭಿಸಿದ ಭಾರತ ಬಳಿಕ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಲೀಗ್ ಹಂತದಲ್ಲಿ ಸೋಲಿಸಿ ಸೆಮಿಫೈನಲ್ಗೆ ಪ್ರವೇಶ ಪಡೆದಿತ್ತು. ಸೆಮಿಸ್ನಲ್ಲೂ ಆಸ್ಟ್ರೇಲಿಯಾವನ್ನೂ ಬಗ್ಗು ಬಡಿದು ಫೈನಲ್ ತಲುಪಿತು. ಅಂತಿಮ ಕದನದಲ್ಲಿ ಕಿವೀಸ್ ತಂಡವನ್ನು ಮಣಿಸಿ ಟ್ರೋಫಿ ಗೆದ್ದುಕೊಂಡಿತು. ಇದರೊಂದಿಗೆ 10 ತಿಂಗಳ ಅಂತದರಲ್ಲೆ ಎರಡು ಐಸಿಸಿ ಟ್ರೋಫಿಗಳನ್ನು ಭಾರತ ಗೆದ್ದುಕೊಂಡು ದಾಖಲೆ ಬರೆದಿದೆ. ಟೀಂ ಇಂಡಿಯಾದ ಈ ಸಾಧನೆಗೆ ಇದೀಗೆ ಬಿಸಿಸಿಐ ಭಾರೀ ಮೊತ್ತದ ಬಹುಮಾನ ಘೋಷಣೆ ಮಾಡಿದೆ. ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳಿಗೂ ಸೇರಿ ಒಟ್ಟು ₹58 ಕೋಟಿ ರೂ. ಘೋಷಣೆ ಮಾಡಿ ಗೌರವಿಸಿದೆ.
"ಟೀಂ ಇಂಡಿಯಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಬಹುಮಾನ ಘೋಷಣೆ ಮಾಡುತ್ತಿರುವುದು ಸಂತೋಷವಾಗುತ್ತಿದೆ. ಅವರೆಲ್ಲರೂ ಇದಕ್ಕೆ ಅರ್ಹರು. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಕ್ರಿಕೆಟ್ ತಂಡ ಹೊಸ ಎತ್ತರಕ್ಕೆ ಏರುತ್ತಿದೆ" ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತಕ್ಕೆ ಐಸಿಸಿ ₹19.50 ಕೋಟಿ ರೂ.ವರೆಗಿನ ಬಹುಮಾನ ಹಣವನ್ನು ಪಡೆದಿದೆ. ಫೈನಲ್‌ನಲ್ಲಿ ಸೋತ ಕಿವೀಸ್ ತಂಡವು 9.70 ಕೋಟಿ ರೂ.ಗಳವರೆಗೆ ಪಡೆದುಕೊಂಡಿತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಒಂದು ವರ್ಷದಲ್ಲಿ ಸತತ ಎರಡನೇ ಐಸಿಸಿ ಪ್ರಶಸ್ತಿಯನ್ನು ಗೆದ್ದಿರುವುದು ಗಮನಾರ್ಹ.