ಮುಂಬೈ : 'ಕ್ರಿಕೆಟ್‌ನ ಮಹಾಯುದ್ಧ' ಎಂದು ಕರೆಯಲ್ಪಡುವ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 18 ನೇ ಸೀಸನ್ಗೆ ಇನ್ನೆರಡು ದಿನಗಳು ಬಾಕಿ ಇವೆ. ಮಾರ್ಚ್ 22 ರಿಂದ ಪ್ರಾರಂಭವಾಗಲಿರುವ ಕ್ರಿಕೆಟ್ ಹಬ್ಬಕ್ಕೆ ಆಟಗಾರರು ಬೆವರು ಹರಿಸುತ್ತಿದ್ದಾರೆ.
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ತನ್ನ ಮೊದಲ ಪಂದ್ಯವನ್ನು ಮಾರ್ಚ್ 23 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಇತ್ತಂಡಗಳು ಅತಿಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡಗಳಾಗಿವೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಪತ್ರಿಕಾಗೋಷ್ಠಿ ಮಾತನಾಡಿ, "ಈ ಬಾರಿ ಕಪ್ ಗೆಲ್ಲಲು ಸಾಕಷ್ಟು ಶ್ರಮ ವಹಿಸಲಾಗುವುದು. ಕಳೆದ ಆವೃತ್ತಿಯಲ್ಲಿ ತಂಡ ಕಳಪೆ ಸಾಧನೆ ಮಾಡಿತ್ತು. ಜೊತೆಗೆ ಕಳೆದ ನಾಲ್ಕು ಸೀಸನ್ಗಳೂ ತಂಡಕ್ಕೆ ಉತ್ತಮವಾಗಿಲ್ಲ. ಈ ಬಾರಿ ಅದನ್ನು ಬದಲಿಸಲಿದ್ದೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ನಾನು ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುತ್ತೇನೆ. ಯಾವುದೇ ಪ್ರತಿಕೂಲ ಸನ್ನಿವೇಶದಲ್ಲಿ ಸಕಾರಾತ್ಮಕ ಆಲೋಚನೆಗಳೊಂದಿಗೆ ಆಡುತ್ತೇನೆ. ಹೀಗಿದ್ದಾಗ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ತಂಡವು ಐಪಿಎಲ್ ಟ್ರೋಫಿ ಎತ್ತಿಹಿಡಿಯಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ" ಎಂದು ಹಾರ್ದಿಕ್ ಪಾಂಡ್ಯ ಹೇಳಿದರು. "ಕಳೆದ ಋತುವಿನಲ್ಲಿ ನಾಯಕರಾಗಿ ಬಡ್ತಿ ಪಡೆದ ಹಾರ್ದಿಕ್ ಪಾಂಡ್ಯ ವಿರುದ್ಧ ತಂಡದ ಅಭಿಮಾನಿಗಳು ಸಿಟ್ಟಾಗಿ, ಭಾರೀ ಟೀಕೆ ಮಾಡಿದ್ದರು. ಇದು ತಂಡದ ಸಮನ್ವಯತೆ ಮೇಲೆ ಪರಿಣಾಮ ಬಿದ್ದಿತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಾಂಡ್ಯ, ನಮ್ಮ ತಂಡದಲ್ಲಿ ಮೂವರು ಶ್ರೇಷ್ಠ ನಾಯಕರಿದ್ದಾರೆ. ರೋಹಿತ್, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಇದ್ದಾರೆ. ಟೀಕೆಗಳು ಯಾವುದು ಆಟದ ಮೇಲೆ ಪರಿಣಾಮ ಬೀರಲ್ಲ" ಎಂದರು.
"ಇಶಾನ್ ಕಿಶನ್ರನ್ನು ತಂಡದಿಂದ ಕೈಬಿಟ್ಟ ಕಾರಣ ರೋಹಿತ್ ಶರ್ಮಾ ಜೊತೆ ಯಾರು ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂಬುದು ತಂಡದ ಆಡಳಿತ ಮಂಡಳಿ ನಿರ್ಧರಿಸಲಿದೆ" ಎಂದು ಹೇಳಿದ್ದಾರೆ.
ಕಳೆದ ಐಪಿಎಲ್ ಋತುವಿನಲ್ಲಿ ನಿಧಾನಗತಿಯ ಓವರ್‌ನಿಂದಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಒಂದು ಪಂದ್ಯದಿಂದ ನಿಷೇಧಿಸಲಾಗಿದೆ. ಹೀಗಾಗಿ, ಮೊದಲ ಪಂದ್ಯದಲ್ಲಿ ಅವರು ಆಡುತ್ತಿಲ್ಲ. ಸೂರ್ಯಕುಮಾರ್ ಯಾದವ್ ಮೊದಲ ಪಂದ್ಯವನ್ನು ಮುನ್ನಡೆಸಲಿದ್ದಾರೆ.