image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿಕೊಂಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಭಾರೀ ನಷ್ಟ

ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿಕೊಂಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಭಾರೀ ನಷ್ಟ

ಹೈದರಾಬಾದ್ : 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಹಿನ್ನಡೆ ಅನುಭವಿಸುವುದರ ಜೊತೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆರ್ಥಿಕವಾಗಿಯೂ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಜೊತೆಗಿನ ಹಲವು ಮನಸ್ತಾಪದ ಬಳಿಕ ಚಾಂಪಿಯನ್ಸ್ ಟ್ರೋಫಿಯನ್ನು ತನ್ನ ನೆಲದಲ್ಲಿ ನಡೆಸಿಕೊಡುವಲ್ಲಿ ಯಶಸ್ಸು ಕಂಡಿದ್ದ ಪಿಸಿಬಿ, ಟೂರ್ನಿಯಲ್ಲಿ ತನ್ನ ತಂಡ ಹಿನ್ನಡೆ ಅನುಭವಿಸುವುದರ ಜೊತೆಗೆ ಆರ್ಥಿಕವಾಗಿಯೂ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ತಾನು (ಪಿಸಿಬಿ) ಅನುಭವಿಸಿದ ನಷ್ಟದ ಬಗೆಗಿನ ಮಾಹಿತಿ ಕೇಳಿದ ಯಾರೇ ಆದರೂ ಆಘಾತಕ್ಕೊಳಗಾಗುವಂತಿದೆ.

29 ವರ್ಷಗಳ ನಂತರ ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ನಡೆಯಿತು. ಅರ್ಧಕ್ಕಿಂತ ಹೆಚ್ಚಿನ ಪಂದ್ಯಗಳು ನಡೆದಿದ್ದು ದುಬೈನಲ್ಲಾದರೂ, ಆತಿಥ್ಯ ಮಾತ್ರ ಪಾಕಿಸ್ತಾನ ವಹಿಸಿತ್ತು. ಭಾರತೀಯ ತಂಡ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದ್ದರ ಪರಿಣಾಮ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿ ಪಂದ್ಯಾವಳಿಯನ್ನು ಆಯೋಜಿಸಿ ಮೀಸೆ ತಿರುವಿತ್ತು. ಆದರೆ, ಟೂರ್ನಿಯಲ್ಲಿ ಎಲ್ಲ ಪಂದ್ಯಗಳನ್ನು ಸೋತಿದ್ದಲ್ಲದೇ ನಷ್ಟದ ಮೇಲೆ ನಷ್ಟ ಅನುಭವಿಸುತ್ತಿರುವುದಾಗಿ ವರದಿಯಾಗುತ್ತಿದೆ.

ಚಾಂಪಿಯನ್ಸ್ ಟ್ರೋಫಿಯ ಸಂಪೂರ್ಣ ಪಂದ್ಯಾವಳಿಯ ಸಮಯದಲ್ಲಿ ಪಾಕಿಸ್ತಾನ ತಂಡ ತನ್ನ ತವರಿನಲ್ಲಿ ಆಡಿದ್ದು ಕೇವಲ ಒಂದು ಪೂರ್ಣ ಪಂದ್ಯವನ್ನು ಮಾತ್ರ. ಇಷ್ಟಕ್ಕೆ ಬರೋಬ್ಬರಿ 740 ಕೋಟಿ ರೂ.ಗಳನ್ನು ಖರ್ಚು ಮಾಡಿದ ಪಿಸಿಬಿ, ಶೇ.85ರಷ್ಟು ನಷ್ಟವನ್ನು ಅನುಭವಿಸಿದೆ ಎಂದು ವರದಿಯಾಗಿದೆ.

ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಚಾಂಪಿಯನ್ಸ್‌ ಟ್ರೋಫಿಗಾಗಿ ಪಿಸಿಬಿಯು ರಾವಲ್ಪಿಂಡಿ, ಲಾಹೋರ್ ಮತ್ತು ಕರಾಚಿ ಸ್ಟೇಡಿಯಂಗಳನ್ನು ನವೀಕರಿಸಿತು. ಇದಕ್ಕಾಗಿ ಸುಮಾರು 58 ಮಿಲಿಯನ್ ಡಾಲರ್ (ಸುಮಾರು 500 ಕೋಟಿ ರೂ.) ಖರ್ಚು ಮಾಡಿದೆ. ಇದು ಅವರ ಬಜೆಟ್‌ಗಿಂತ ಶೇ. 50ರಷ್ಟು ಹೆಚ್ಚು ಅಂತ ತಿಳಿದು ಬಂದಿದೆ. ಇದಲ್ಲದೆ, ಟೂರ್ನಿಯ ಈವೆಂಟ್ ಸಿದ್ಧತೆಗಳಿಗಾಗಿ ಹೆಚ್ಚುವರಿ 40 ಮಿಲಿಯನ್ ಡಾಲರ್‌ (ಸುಮಾರು 347 ಕೋಟಿ ರೂ.) ಖರ್ಚು ಮಾಡಿದೆ. ಆದರೆ, ಹೋಸ್ಟಿಂಗ್ ಶುಲ್ಕ ಮತ್ತು ಟಿಕೆಟ್ ಮಾರಾಟ ಮತ್ತು ಪ್ರಾಯೋಜಕತ್ವದಿಂದ ಪಿಸಿಬಿಇಗೆ ಬಂದಿದ್ದು ಕೇವಲ 6 ಮಿಲಿಯನ್ ಡಾಲರ್‌ (ಸುಮಾರು 52 ಕೋಟಿ ರೂ.) ಮಾತ್ರ. ಪರಿಣಾಮ ಪಿಸಿಬಿ ಹೆಚ್ಚು ಕಡಿಮೆ ಶೇ.85ರಷ್ಟು (ಸುಮಾರು ರೂ. 740 ಕೋಟಿ) ನಷ್ಟವನ್ನು ಅನುಭವಿಸಿದೆ ಎಂದು ವರದಿಯಾಗಿದೆ.

ಚಾಂಪಿಯನ್ಸ್ ಟ್ರೋಫಿಯ ತನ್ನ ಮೊದಲ ಗ್ರೂಪ್ ಎ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಲಾಹೋರ್‌ನಲ್ಲಿ ಸೋಲು ಅನುಭವಿಸಿದ ಮೊಹಮ್ಮದ್ ರಿಜ್ವಾನ್ ಮುಂದಾಳತ್ವದ ಪಾಕಿಸ್ತಾನ, ನಂತರ ದುಬೈಗೆ ಪ್ರಯಾಣ ಬೆಳೆಸಿ ಭಾರತವನ್ನು ಎದುರಿಸಿತು. ಬಾಂಗ್ಲಾದೇಶ ವಿರುದ್ಧದ 3ನೇ ಮತ್ತು ಅಂತಿಮ ಗ್ರೂಪ್ ಪಂದ್ಯವು ಮಳೆಯಿಂದ ರದ್ದಾದ ಪರಿಣಾಮ ನ್ಯೂಜಿಲೆಂಡ್ ಮತ್ತು ಭಾರತದ ವಿರುದ್ಧದ ಸೋಲಿನಿಂದಾಗಿ, ಪಾಕಿಸ್ತಾನವು ಟೂರ್ನಮೆಂಟ್‌ನಿಂದ ಹೊರಬೀಳಬೇಕಾಯಿತು. ನ್ಯೂಜಿಲೆಂಡ್ ವಿರುದ್ಧ ತವರು ಪಂದ್ಯ ಸೇರಿದಂತೆ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯದಲ್ಲಿಯೂ ಗೆಲುವಿನ ರುಚಿ ನೋಡಲಾಗದೆ ಹೊರಬೀಳಬೇಕಾಯಿತು.

ನಷ್ಟದ ಪರಿಹಾರಕ್ಕೆ ಮುಂದಾಗಿರುವ ಪಿಸಿಬಿ ದೇಶದ ಆಟಗಾರರ ಸಂಬಳಕ್ಕೂ ಕತ್ತರಿ ಹಾಕಿದೆ ಎಂಬ ವರದಿ ಇದೆ. ರಾಷ್ಟ್ರೀಯ ಟಿ20 ಚಾಂಪಿಯನ್‌ಶಿಪ್ - ದೇಶೀಯ ಟಿ20 ಟೂರ್ನಮೆಂಟ್‌ನಲ್ಲಿ ಪಂದ್ಯದ ಶುಲ್ಕವನ್ನು ಶೇ.90ರಷ್ಟು ಕಡಿಮೆ ಮಾಡಿರುವುದರಿಂದ ಆಟಗಾರರು ಆರ್ಥಿಕ ಪರಿಣಾಮಗಳನ್ನು ಎದುರಿಸಬೇಕಾಯಿತು ಎಂದು ವರದಿಯಾಗಿದೆ. ಒಂದು ಕಾಲದಲ್ಲಿ ಪಂಚತಾರಾ ಹೋಟೆಲ್‌ಗಳಲ್ಲಿ ತಂಗಿದ್ದ ಈ ಕ್ರಿಕೆಟಿಗರು, ಈಗ ಸಾಧಾರಣ ಬಜೆಟ್‌ನ ವಸತಿಗಳಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಆದರೆ, ಆಡಳಿತದಲ್ಲಿರುವ ನಾಯಕರು ಮಾತ್ರ ಲಕ್ಷಾಂತರ ರೂಪಾಯಿ ಸಂಬಳವನ್ನು ಪಡೆಯುತ್ತಲೇ ಇದ್ದಾರೆ ಎಂದು ವರದಿ ವಿವರಿಸಿದೆ.

Category
ಕರಾವಳಿ ತರಂಗಿಣಿ