ರಾಯ್ಪುರ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನಾಯಕತ್ವದ ಇಂಡಿಯಾ ಮಾಸ್ಟರ್ಸ್ ತಂಡವು ಚೊಚ್ಚಲ ಅಂತಾರಾಷ್ಟ್ರೀಯ ಮಾಸ್ಟರ್ಸ್ ಟಿ20 ಲೀಗ್ ಟ್ರೋಫಿಯನ್ನು ಎತ್ತಿ ಹಿಡಿದಿದೆ.
ರಾಯ್ಪರದ ಶಾಹೀದ್ ವೀರನಾರಾಯಣ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ ನೇತೃತ್ವದ ವೆಸ್ಟ್ ಇಂಡೀಸ್ ಮಾಸ್ಟರ್ಸ್ ಪಡೆ ವಿರುದ್ಧ ಇಂಡಿಯಾ ಮಾಸ್ಟರ್ಸ್ ಗೆದ್ದು ಬೀಗಿತು.
ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಡ್ವೆನ್ ಸ್ಮಿತ್ 35 ಎಸೆತಗಳಲ್ಲಿ 2 ಸಿಕ್ಸರ್, 6 ಬೌಂಡರಿ ಮೂಲಕ 45 ರನ್ ಗಳಿಸಿದರೆ, ಸಿಮನ್ಸ್ 41 ಎಸೆತಗಳಲ್ಲಿ 1 ಸಿಕ್ಸರ್, 5 ಬೌಂಡರಿಯಿಂದ ಭರ್ಜರಿ 57 ರನ್ ಪೇರಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಇಂಡಿಯಾ ಮಾಸ್ಟರ್ಸ್ ಮಾರಕ ಬೌಲಿಂಗ್ ದಾಳಿಗೆ ನಾಯಕ ಬ್ರಿಯಾನ್ ಲಾರಾ ಸೇರಿದಂತೆ ಉಳಿದ ಆಟಗಾರರು ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಇದರಿಂದಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಇಂಡಿಯಾ ಮಾಸ್ಟರ್ಸ್ ಪರ ಕರ್ನಾಟಕದ ವೇಗಿ ವಿನಯ್ ಕುಮಾರ್ 3 ವಿಕೆಟ್ ಕಬಳಿಸಿ ಎದುರಾಳಿ ತಂಡಕ್ಕೆ ಮಾರಕವಾದರು. ನದೀಮ್ 2 ವಿಕೆಟ್, ನೇಗಿ ಮತ್ತು ಬಿನ್ನಿ ತಲಾ 1 ವಿಕೆಟ್ ಪಡೆದರು. ಸಾಧಾರಣ ಗುರಿ ಬೆನ್ನತ್ತಿದ್ದ ಇಂಡಿಯಾ ಮಾಸ್ಟರ್ಸ್ಗೆ ಆರಂಭಿಕರಾಗಿ ಬ್ಯಾಟಿಂಗ್ಗೆ ಇಳಿದ ಆಂಬಟಿ ರಾಯುಡು 74 ರನ್ (50 ಎಸೆತ, 4 ಬೌಂಡರಿ, 3 ಸಿಕ್ಸರ್) ಬಾರಿಸಿ ತಂಡವನ್ನು ಗೆಲುವಿನ ದಡಕ್ಕೆ ತಂದರು. ಇನ್ನು ಸಚಿನ್ ತೆಂಡೂಲ್ಕರ್ 2 ಸಿಕ್ಸರ್, 2 ಬೌಂಡರಿ ಮೂಲಕ 25 ರನ್ ಗಳಿಸಿದರು. ಬಳಿಕ ಬಂದ ಗುರುಕೂರತ್ ಸಿಂಗ್ 14 ರನ್ ಹೊಡೆದು ಔಟಾದರು. ನಂತರ ಯುವರಾಜ್ ಸಿಂಗ್ 13 ರನ್ ಮತ್ತು ಸ್ಟುವರ್ಟ್ ಬಿನ್ನಿ 16 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 17.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿ ಇಂಡಿಯಾ ಮಾಸ್ಟರ್ಸ್ ಟ್ರೋಫಿ ತನ್ನದಾಗಿಸಿಕೊಂಡಿತು.