ಛತ್ತೀಸ್ಗಢ: ಯುವರಾಜ್ ಸಿಂಗ್ ಅವರ ಅರ್ಧಶತಕ ಮತ್ತು ಎಡಗೈ ಸ್ಪಿನ್ನರ್ ಶಹಬಾಜ್ ನದೀಮ್ ಅವರ ನಾಲ್ಕು ವಿಕೆಟ್ ಗಳ ಸ್ಫೋಟಕ ಬೌಲಿಂಗ್ ನೆರವಿನಿಂದ ಇಂಡಿಯಾ ಮಾಸ್ಟರ್ಸ್ ತಂಡವು ಇಂಟರ್ ನ್ಯಾಷನಲ್ ಮಾಸ್ಟರ್ಸ್ ಲೀಗ್ (ಐಎಂಎಲ್) 2025 ರ ಮೊದಲ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ಮಾಸ್ಟರ್ಸ್ ತಂಡವನ್ನು 94 ರನ್ಗಳಿಂದ ಸೋಲಿಸಿ ಫೈನಲ್ಗೆ ಪ್ರವೇಶಿಸಿದೆ.
ಸಚಿನ್ ತೆಂಡೂಲ್ಕರ್ ಪಡೆಗೆ ಇದು ಭಾನುವಾರದ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆಯುವ ಹೋರಾಟ ಮಾತ್ರವಾಗಿರದೇ, ಇದು ಹಳೆಯ ಸೋಲುಗಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಅವಕಾಶವೂ ಆಗಿತ್ತು. ಗುರುವಾರ ಇಲ್ಲಿನ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರಿಗೆ ಇಂದಿನ ಪಂದ್ಯ ರಸದೌತಣವನ್ನು ನೀಡಿತು.
ಆಸ್ಟ್ರೇಲಿಯಾ ಮಾಸ್ಟರ್ಸ್ ತಂಡವು ಬ್ಯಾಟಿಂಗ್ಗಾಗಿ ವಿನ್ಯಾಸಗೊಳಿಸಿದ ಟ್ರ್ಯಾಕ್ನಲ್ಲಿ ಬ್ಯಾಟಿಂಗ್ ಮಾಡಲು ಆಹ್ವಾನಿಸಿದ ನಂತರ ಸಚಿನ್ ತೆಂಡೂಲ್ಕರ್ ಇಂಡಿಯಾ ಮಾಸ್ಟರ್ಸ್ ಇನ್ನಿಂಗ್ಸ್ನ ಉಸ್ತುವಾರಿ ವಹಿಸಿಕೊಳ್ಳಲು ಹೊರನಡೆದಾಗ ರಾಯ್ ಪುರ ಪ್ರೇಕ್ಷಕರು ರೋಮಾಂಚನಗೊಂಡರು. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ 42 ರನ್ ಗಳಿಸಿ ಔಟಾದರು. ನಂತರ ಯುವರಾಜ್ ಸಿಂಗ್ ಅವರ ಉತ್ತಮ ಆಟದಿಂದ ತಂಡವು 7 ವಿಕೆಟ್ ನಷ್ಟಕ್ಕೆ 220ರನ್ ಗಳಿಸಿ ಇನ್ನಿಂಗ್ಸ್ ಮುಕ್ತಾಯಗೊಳಿಸಿತು.
ಅಂಬಾಟಿ ರಾಯುಡು (5) ಮತ್ತು ಪವನ್ ನೇಗಿ (11) ಅವರ ಆರಂಭಿಕ ವಿಕೆಟ್ಗಳಿಂದ ವಿಚಲಿತರಾಗದ ತೆಂಡೂಲ್ಕರ್ ತಮ್ಮ ಸಿಗ್ನೇಚರ್ ಡ್ರೈವ್ ಗಳು, ಸ್ವೀಪ್ ಗಳು ಮತ್ತು ಫ್ಲಿಕ್ ಗಳನ್ನು ಪ್ರದರ್ಶಿಸಿ ಹಳೆಯ ಕಾಲವನ್ನು ಮತ್ತೆ ನೆನಪಿಸಿದರು. ಮತ್ತೊಂದೆಡೆ, ಯುವರಾಜ್ ಸಿಂಗ್ ಅವರು ಬೃಹತ್ ಸಿಕ್ಸರ್ನೊಂದಿಗೆ ತಮ್ಮ ಆಟ ಆರಂಭಿಸಿದರು.
ಸಚಿನ್ ತೆಂಡೂಲ್ಕರ್ 25 ಮತ್ತು 35 ರನ್ ಗಳಿಸಿದ ಸಂದರ್ಭಗಳಲ್ಲಿ ಔಟಾಗುವುದರಿಂದ ಪಾರಾದಾಗ ಇಡೀ ಕ್ರೀಡಾಂಗಣದಲ್ಲಿ ಕೊಂಚ ಹೊತ್ತು ಸಂಪೂರ್ಣ ಮೌನ ಆವರಿಸಿತ್ತು. ಆದರೆ ಅವರು ಔಟಾಗಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆಯೇ "ಸಚಿನ್! ಸಚಿನ್!" ಎಂಬ ಘೋಷಣೆಗಳು ಹಿಂದೆಂದಿಗಿಂತಲೂ ಜೋರಾಗಿ ಪ್ರತಿಧ್ವನಿಸಿದವು. ಈ ಜೋಡಿ ಮೂರನೇ ವಿಕೆಟ್ಗೆ 47 ರನ್ಗಳ ಜೊತೆಯಾಟವಾಡುವ ಮೂಲಕ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿತು.