ದಕ್ಷಿಣ ಕನ್ನಡ ಜಿಲ್ಲಾ ಬ್ಯಾಡ್ಮಿಂಟನ್ ಕ್ರೀಡೆಯ ಏಳಿಗೆಗಾಗಿ ಸ್ಥಾಪನೆಗೊಂಡ ನಮ್ಮ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಎಸೋಸಿಯೇಶನ್ (ರಿ) ಸಂಸ್ಥೆಯು ಜಿಲ್ಲೆಯ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಗುರುತಿಸಿಕೊಂಡಂತಹ ಒಂದು ಸಮೂಹ ಸಂಸ್ಥೆಯಾಗಿದ್ದು, ಈಗ ರಾಜ್ಯದ ಕರ್ನಾಟಕ ಬ್ಯಾಡ್ಮಿಂಟನ್ ಎಸೋಸಿಯೇಶನ್ ಸಂಸ್ಥೆಯೊಂದಿಗೆ ಸಂಯೋಜಿಸಲ್ಪಟ್ಟಿದೆ ಎಂದು ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಇತ್ತೀಚೆಗೆ ನಡೆಸಲಾಗಿರುವ ಕರ್ನಾಟಕ ಒಲಂಪಿಕ್ ಕ್ರೀಡಾಕೂಟ 2025ರಲ್ಲಿ ಬ್ಯಾಡ್ಮಿಂಟನ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಕಾರಣಭೂತರಾಗಿರುತ್ತೇವೆ.
ನಮ್ಮ ಸಂಸ್ಥೆಯು ದಕ್ಷಿಣ ಕನ್ನಡ ಜಿಲ್ಲೆಯ ಬಾಲಕರ, ಬಾಲಕಿಯರ ಬ್ಯಾಡ್ಮಿಂಟನ್ ಕ್ರೀಡೆಯ ಸರ್ವೋತ್ತೋಮುಖ ಏಳಿಗೆಗಾಗಿ ಜಿಲ್ಲೆಯಲ್ಲಿ ಮೊದಲ ಸಮ್ಮರ್ ಕ್ಯಾಂಪ್ ಕಾರ್ಯಕ್ರಮವನ್ನು ಇದೇ ಬರುವ 2025ರ ಎಪ್ರಿಲ್ ತಿಂಗಳ 7 ರಿಂದ ಮೊದಲ್ಗೊಂಡು ಎಪ್ರಿಲ್ ತಿಂಗಳಲ್ಲಿ 21 ದಿನ ಹಾಗೂ ಮೇ ತಿಂಗಳಲ್ಲಿ 21 ದಿನಗಳಲ್ಲಿ ಬ್ಯಾಡ್ಮಿಂಟನ್ ಕ್ರೀಡಾ ತರಬೇತಿ ಶಿಬಿರವನ್ನು ಕರ್ನಾಟಕ ಬ್ಯಾಡ್ಮಿಂಟನ್ ಎಸೋಸಿಯೇಶನ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇದರ ಸಹಭಾಗಿತ್ವದಲ್ಲಿ ನಗರದ ಯು.ಎಸ್ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿಸಲು ಉದ್ದೇಶಿಸಲಾಗಿದೆ.
ಮಾತ್ರವಲ್ಲದೆ ನಮ್ಮ ಸಂಸ್ಥೆಯ ವತಿಯಿಂದ ಇದೇ ಮುಂಬರುವ ದಿನಗಳಲ್ಲಿ ಜಿಲ್ಲಾ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ರ್ಯಾಕಿಂಗ್ ಕ್ರೀಡಾಕೂಟವನ್ನು ಜರುಗಿಸಲು ನಮ್ಮ ಮಾತೃ ಸಂಸ್ಥೆಯಾದ ಕರ್ನಾಟಕ ಬ್ಯಾಡ್ಮಿಂಟನ್ ಎಸೋಸಿಯೇಶನ್ ಸಂಸ್ಥೆಯ ಮೂಲಕ ಜರಗಿಸಲು ಯೋಜನೆ ರೂಪಿಸಲಾಗಿರುತ್ತದೆ.
ನಮ್ಮ ಸಂಸ್ಥೆಯು ಜಿಲ್ಲೆಯ ಒಂದು ಪ್ರತಿಷ್ಠಿತ ಸಮೂಹ ಸಂಸ್ಥೆಯಾಗಿ ಬೆಳೆಯುತ್ತಿದ್ದು ಜಿಲ್ಲೆಯ ಎಂಟು ತಾಲೂಕುಗಳಲ್ಲಿನ ಸಮೂಹ ಸಂಸ್ಥೆಗಳನ್ನು ಒಳಗೊಂಡಿರುವ ಸಂಸ್ಥೆಯಾಗಿರುತ್ತದೆ. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ನಗರದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲು ಹಾಗೂ ಜಿಲ್ಲೆಯ ಬಾಲಕ ಬಾಲಕಿಯರಿಗಾಗಿ ಹಾಗೂ ಸಾರ್ವಜನಿಕರಿಗಾಗಿ ಬ್ಯಾಡ್ಮಿಂಟನ್ ಕ್ರೀಡೆಯನ್ನು ಅಭಿವೃದ್ಧಿಗೊಳಿಸಲು ರೂಪಿಸಲಾಗಿರುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸುದೇಶ್ ಪಿಕೆ, ಸುಪ್ರಿತ್ ಆಳ್ವಾ, ದೀಪಕ್ ಕುಮಾರ್, ಲಕ್ಷ್ಮಿ ಪಿ ಸುವರ್ಣ, ರಿಯಾಜ್ ಪಿ ಸಿ ಮತ್ತು ಅಜಾರ್ ಹಸನ್ ಉಪಸ್ಥಿತರಿದ್ದರು.