ದುಬೈ : "ನಾನು ಏಕದಿನ ಕ್ರಿಕೆಟ್ ಮಾದರಿಯಿಂದ ನಿವೃತ್ತಿ ಪಡೆಯುತ್ತಿಲ್ಲ" ಎಂದು ಭಾನುವಾರ ರಾತ್ರಿ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಸ್ಪಷ್ಟಪಡಿಸಿದರು.
ಆಸ್ಟ್ರೇಲಿಯಾ ಪ್ರವಾಸದಲ್ಲಿ ವೈಫಲ್ಯ ಮತ್ತು ನಾಯಕನಾಗಿ ಉತ್ತಮವಾಗಿ ರನ್ ಪೇರಿಸಲು ಸಾಧ್ಯವಾಗದಿರುವ ಕಾರಣಕ್ಕೆ ಕೆಲ ಸಮಯದಿಂದ ರೋಹಿತ್ ಶರ್ಮಾ ನಿವೃತ್ತಿ ಹೊಂದಲಿದ್ದಾರೆ ಎಂಬ ಊಹಾಪೋಹಗಳು ಹರಡಿದ್ದವು. ಆದರೆ, ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ 76 ರನ್ ಬಾರಿಸುವ ಮೂಲಕ ತನ್ನಲ್ಲಿ ಇನ್ನೂ ಕ್ರಿಕೆಟ್ ಕೌಶಲ ಉಳಿದಿದೆ ಎಂಬುದನ್ನು ಅವರು ಸಾಬೀತುಪಡಿಸಿದರು.
"ನಾನು ಈ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿಲ್ಲ. ಯಾವುದೇ ರೀತಿಯ ಊಹಾಪೋಹಗಳನ್ನು ಹರಡಬೇಡಿ" ಎಂದು ಶರ್ಮಾ ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ಸ್ಪಷ್ಟಪಡಿಸಿದರು.
"ಭವಿಷ್ಯದ ಬಗ್ಗೆ ನನ್ನಲ್ಲಿ ಯಾವುದೇ ಯೋಜನೆಗಳಿಲ್ಲ. ಏನು ಸಂಭವಿಸಬೇಕೋ ಅದು ಸಂಭವಿಸುತ್ತಿರುತ್ತದೆ" (ಜೋ ಹೊ ರಹಾ ಹೇ, ವೊ ಚಲ್ತಾ ಜಾಯೇಗಾ) ಎಂದು ಇದೇ ವೇಳೆ ಅವರು ಹೇಳಿದರು.
ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ 83 ಎಸೆತಗಳನ್ನು ಎದುರಿಸಿ 76 ರನ್‌ಗಳ ಉಪಯುಕ್ತ ಕೊಡುಗೆ ನೀಡಿದರು. "ಕಳೆದ 3-4 ಪಂದ್ಯಗಳಲ್ಲಿ ನಾನು ಯಾವ ರೀತಿಯ ಪ್ರದರ್ಶನ ನೀಡಿದ್ದೇನೋ ಅದನ್ನೇ ಇವತ್ತೂ ಮುಂದುವರೆಸಿದ್ದೇನೆ. ಬ್ಯಾಟಿಂಗ್‌ನಲ್ಲಿ ವಿಭಿನ್ನವಾದುದೇನೂ ಮಾಡಿಲ್ಲ. ಪವರ್ ಪ್ಲೇನಲ್ಲಿ ರನ್ ಸಂಗ್ರಹಿಸುವುದು ಎಷ್ಟು ಮುಖ್ಯ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಏಕೆಂದರೆ ಆ 10 ಓವರ್‌ಗಳ ಪವರ್ ಪ್ಲೇ ನಂತರ ಏನಾಗುತ್ತದೆ ಎಂಬುದನ್ನು ನಾವು ನೋಡಿದ್ದೇವೆ. ಫೀಲ್ಡಿಂಗ್ ವಿಸ್ತರಿಸಿಕೊಂಡಾಗ ಹಾಗು ಸ್ಪಿನ್ನರ್‌ಗಳು ಬಂದಾಗ ರನ್ ಗಳಿಕೆ ಕಷ್ಟವಾಗುತ್ತದೆ" ಎಂದು ವಿವರಿಸಿದರು.
ಕೆ.ಎಲ್.ರಾಹುಲ್ ಅವರನ್ನು 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸುವುದರ ಕುರಿತ ಚರ್ಚೆಗೆ, "ರಾಹುಲ್ ಓರ್ವ ವಿಕೆಟ್ ಕೀಪರ್, ಬ್ಯಾಟರ್ ಆಗಿ ತಮ್ಮ ಹೊಸ ಜವಾಬ್ದಾರಿಯನ್ನು ನಿರಂತರವಾಗಿ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ತಂಡದ ಪ್ರತಿ ಸದಸ್ಯರೂ ಅವರದೇ ಆದ ರೀತಿಯಲ್ಲಿ ಕೊಡುಗೆ ನೀಡುವುದು ಬಹಳ ಮುಖ್ಯ. ನಾವು ಕೆ.ಎಲ್.ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಾತನಾಡುವಾಗ, ಅವರು ಬ್ಯಾಟಿಂಗ್‌ನಲ್ಲಿ ತಾಳ್ಮೆಯಿಂದ ವರ್ತಿಸುವುದನ್ನೂ ಬಹಳ ಆಳವಾಗಿ ಚರ್ಚಿಸುತ್ತೇವೆ ಎಂದರು.