ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (WPL)ನಲ್ಲಿ ತವರು ಅಭಿಮಾನಿಗಳೆದುರು ಸತತ ನಾಲ್ಕನೇ ಸೋಲನುಭವಿಸುವ ಮೂಲಕ ಆರ್‌ಸಿಬಿ ತಂಡಕ್ಕೆ ಭಾರಿ ಮುಖಭಂಗವಾಗಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ವಿಕೆಟ್‌ಗಳ ಅಂತರದಿಂದ ಸೋಲಿಗೆ ಶರಣಾಯಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 5 ವಿಕೆಟ್‌ಗಳ ನಷ್ಟಕ್ಕೆ 147 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಆರಂಭಿಕರಾಗಿ ಕ್ರೀಸಿಗೆ ಆಗಮಿಸಿದ ನಾಯಕಿ ಸ್ಮೃತಿ ಮಂದಾನ ಕೇವಲ 8 ರನ್ಗಳಿಸಿ ಪೆವಿಲಿಯನ್ ಸೇರಿದರು. ವ್ಯಾಟ್ ಹಾಡ್ಜ್ 21 ರನ್ ಪೇರಿಸಿದರೆ, ತಂಡದ ಟ್ರಬಲ್ ಶೂಟರ್ ಎನಿಸಿರುವ ಎಲ್ಲೀಸ್ ಪೆರ್ರಿ ಮತ್ತೊಮ್ಮೆ ಅರ್ಧಶತಕ ದಾಖಲಿಸಿ ತಂಡಕ್ಕೆ ಆಧಾರವಾದರು. 47 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಮೂರು ಬೌಂಡರಿಗಳೊಂದಿಗೆ 60 ರನ್ ಗಳಿಸಿದ ಪೆರ್ರಿ ಅಜೇಯವಾಗುಳಿದರು. ಆ ಮೂಲಕ ಪೆರ್ರಿ ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡರು.
148 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಆರಂಭಿಕ ಹಂತದಲ್ಲಿಯೇ ನಾಯಕಿ ಮೆಗ್ ಲ್ಯಾನಿಂಗ್ ಅವರ ವಿಕೆಟ್ ಕಳೆದುಕೊಂಡಿತು. ಆದರೆ ನಂತರ ಜೊತೆಯಾದ ಶಫಾಲಿ ವರ್ಮಾ ಹಾಗೂ ಜೆಸ್ ಜೊನಾಸ್ಸನ್ ಜೋಡಿ ತಂಡವನ್ನು ಗೆಲುವಿನ ದಡ ಸೇರಿಸಿತು. ಶೆಫಾಲಿ ವರ್ಮಾ 43 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್‌ಗಳ ಸಹಿತ 80 ರನ್ ಗಳಿಸಿ ಮಿಂಚಿದರೆ, ಜೆಸ್ ಜೊನಾಸ್ಸೆನ್ 38 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 61 ರನ್ ಗಳಿಸಿದರು. ಅಂತಿಮವಾಗಿ, 15.3 ಓವರ್‌ಗಳಲ್ಲಿಯೇ ಡೆಲ್ಲಿ ಗೆದ್ದು ಬೀಗಿತು.
ಸಂಕ್ಷಿಪ್ತ ಸ್ಕೋರ್ ವಿವರ: ರಾಯಲ್ ಚಾಲೆಂಜರ್ಸ್ ಬೆಂಗಳೂರು - 147/5 (20), ಎಲ್ಲಿಸ್ ಪೆರ್ರಿ 60 (47), ರಾಘವಿ ಬಿಶ್ತ್ 33 (32), ಶಿಖಾ ಪಾಂಡೆ 4-24/2, ಎನ್.ಚಾರಣಿ 4-28/2
ಡೆಲ್ಲಿ ಕ್ಯಾಪಿಟಲ್ಸ್ - 151/1 (15.3), ಶಫಾಲಿ ವರ್ಮಾ 80 (43), ಜೆಸ್ ಜೊನಾಸ್ಸನ್ 61 (38), ರೇಣುಕಾ ಸಿಂಗ್ 4-28/1