ದುಬೈ : ಚಾಂಪಿಯನ್ಸ್ ಟ್ರೋಫಿ ಭಾಗವಾಗಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ಗಳ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾ ನೀಡಿದ್ದ 228 ರನ್ಗಳ ಸಾಮಾನ್ಯ ಗುರಿ ಬೆನ್ನತ್ತಿದ ಭಾರತ 21 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗಾರಿ ಬಾರಿಸಿತು.
ಚೇಸಿಂಗ್ ವೇಳೆ ಉತ್ತಮ ಆರಂಭ ಪಡೆದಿದ್ದ ಭಾರತ ರೋಹಿತ್ ಶರ್ಮಾ (41) ನಿರ್ಗಮನದ ಬಳಿಕ ವಿರಾಟ್ ಕೊಹ್ಲಿ (22), ಶ್ರೇಯಸ್ ಅಯ್ಯರ್ (15), ಅಕ್ಷರ್ ಪಟೇಲ್ (8) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಶುಭಮನ್ ಗಿಲ್, ರಾಹುಲ್ ಜೊತೆಗೂಡಿ ಸಮಯೋಚಿತ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿದರು. ಇದರೊಂದಿಗೆ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಗಿಲ್ 129 ಎಸೆತಗಳನ್ನು ಎದುರಿಸಿ 9 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ ಅಜೇಯ 101 ರನ್ ಕಲೆಹಾಕಿದರು.
ಅಕ್ಷರ್ ಪಟೇಲ್ ನಿರ್ಗಮಿಸುತ್ತಿದ್ದಂತೆ ಬ್ಯಾಟಿಂಗ್ಗೆ ಆಗಮಿಸಿದ ರಾಹುಲ್, ಗಿಲ್ ಜೊತೆ ಸೇರಿ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಜೊತೆಗೆ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 47 ಎಸೆತಗಳನ್ನೆದುರಿಸಿದ ರಾಹುಲ್ 41 ರನ್ ಬಾರಿಸಿದರು. ಇದರಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸೇರಿವೆ. ಅಲ್ಲದೇ ಪಂದ್ಯದ ಗೆಲುವಿಗೆ 2 ರನ್ ಬೇಕಿದ್ದಾಗ ಸಿಕ್ಸರ್ ಸಿಡಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಬಾಂಗ್ಲಾ ಆರಂಭಿಕ ಆಘಾತ ಎದುರಿಸಿತು. ಕೇವಲ 35 ರನ್ಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ಹಸನ್ (25), ಮೆಹದಿ ಹಸನ್ (5) ಅಲ್ಪಮೊತ್ತಕ್ಕೆ ನಿರ್ಗಮಿಸಿದರೆ, ನಾಯಕ ನಜ್ಮುಲ್ ಶಾಂಟೋ, ಸೌಮ್ಯ ಸರ್ಕಾರ್, ಮುಶ್ಫಿಖರ್ ರಹೀಮ್ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು.
ಆದರೆ ತೋಹಿದ್ ಹೃದೊಯಿ ಮತ್ತು ಜಾಕರ್ ಅಲಿ ಜೊತೆಗೂಡಿ ತಂಡದ ಸ್ಕೋರ್ 200ರ ಗಡಿ ದಾಟುವಲ್ಲಿ ನೆರವಾದರು. ಈ ಇಬ್ಬರೂ 150 ಎಸೆತಗಳಲ್ಲಿ 154 ರನ್ ಸಿಡಿಸಿದರು. ಹೃದೊಯಿ 118 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ ಶತಕ ಸಿಡಿಸಿದರೆ, ಜಾಕೆರ್ ಅಲಿ 114 ಎಸೆತಗಳಲ್ಲಿ 68 ರನ್ ಪೇರಿಸಿದರು.
ಚಾಂಪಿಯನ್ಸ್ ಟ್ರೋಫಿಯ ಭಾರತದ ಮೊದಲ ಪಂದ್ಯದಲ್ಲೇ ಮೊಹಮ್ಮದ್ ಶಮಿ ಮಿಂಚಿನ ಬೌಲಿಂಗ್ ಮಾಡಿ 5 ವಿಕೆಟ್ ಉರುಳಿಸಿದರು. ಇದರೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 200 ವಿಕೆಟ್ ಪಡೆದ ಬೌಲರ್ ಎಂಬ ವಿಶ್ವದಾಖಲೆ ಬರೆದಿದ್ದಾರೆ.