ಹೈದೆರಾಬಾದ್ : ಮಹಿಳಾ ಪ್ರೀಮಿಯರ್ ಲೀಗ್(ಡಬ್ಲ್ಯೂಪಿಎಲ್)ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ನಾಯಕಿ ಸ್ಮೃತಿ ಮಂಧಾನ ಅವರ ಅದ್ಭುತ ಆಟ ಎಲ್ಲರ ಮನಗೆದ್ದಿತು. ಭರ್ಜರಿ ಅರ್ಧ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಮಣಿಸಿದೆ. ಇದರೊಂದಿಗೆ ಆರ್‌ಸಿಬಿ ಗೆಲುವಿನ ಓಟ ಮುಂದುವರೆಸಿತು.
ಡೆಲ್ಲಿ 19.3 ಓವರ್‌ಗಳಲ್ಲಿ 141 ರನ್‌ಗಳಿಗೆ ಸರ್ವ ಪತನಗೊಂಡಿತು. ಆರ್‌ಸಿಬಿ 16.2 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್‌ಗಳು ಕಳೆದುಕೊಂಡು ಗೆಲುವಿನ ದಡ ತಲುಪಿತು.
ಶತಕದ ಜೊತೆಯಾಟ: ಸ್ಮೃತಿ ಮಂಧಾನ ಮತ್ತು ಡ್ಯಾನಿ ವ್ಯಾಟ್ ಮೊದಲ ವಿಕೆಟ್‌ಗೆ 107 ರನ್‌ಗಳ ಜೊತೆಯಾಟವಾಡಿದರು. ಇದಾದ ನಂತರ ದೆಹಲಿ ಸೋಲಿನತ್ತ ಸಾಗಿತು. ಮಂಧಾನ ಅರ್ಧಶತಕ ಗಳಿಸಿ ಮುನ್ನಡೆದರು. ಆದರೆ ವ್ಯಾಟ್ ಅರ್ಧಶತಕ ಗಳಿಸುವ ಅವಕಾಶದಿಂದ ವಂಚಿತರಾದರು. ಅರುಂಧತಿ ರೆಡ್ಡಿ ಬೌಲಿಂಗ್‌ನಲ್ಲಿ ಜೆಮಿಮಾ ರೊಡ್ರಿಗಸ್ ಅವರಿಗೆ ಕ್ಯಾಚಿತ್ತು ಔಟಾದರು.
ಬಲಗೈ ಬ್ಯಾಟರ್ ವ್ಯಾಟ್ 33 ಎಸೆತಗಳಲ್ಲಿ ಏಳು ಬೌಂಡರಿಗಳ ಸಹಾಯದಿಂದ 42 ರನ್ ಗಳಿಸಿದರು. ತಂಡಕ್ಕೆ ಗೆಲ್ಲಲು ಒಂಬತ್ತು ರನ್‌ಗಳು ಬೇಕಾಗಿದ್ದಾಗ ಮಂಧಾನ ಔಟಾದರು. ಅವರು 47 ಎಸೆತಗಳಲ್ಲಿ 10 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳಿಂದ 81 ರನ್ ಪೇರಿಸಿದರು. ಇದಾದ ಬಳಿಕ ಬಂದ ಆಲಿಸ್ ಪೆರ್ರಿ ಮತ್ತು ರಿಚಾ ಘೋಷ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಸ್ಮೃತಿ ಮಂಧಾನ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಆರ್‌ಸಿಬಿ ಪರ ರೇಣುಕಾ ಠಾಕೂರ್ ಮತ್ತು ಜಾರ್ಜಿಯಾ ವೇರ್‌ಹ್ಯಾಮ್ ತಲಾ 3 ವಿಕೆಟ್ ಪಡೆದು ದೆಹಲಿ ತಂಡ ದೊಡ್ಡ ಸ್ಕೋರ್ ದಾಖಲಿಸುವುದನ್ನು ತಡೆದರು.