image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉತ್ತರಾಖಂಡದಲ್ಲಿ ನಡೆಯುತ್ತಿದ್ದ 38ನೇ ರಾಷ್ಟ್ರೀಯ ಕ್ರೀಡಾಕೂಟ ಮುಕ್ತಾಯ

ಉತ್ತರಾಖಂಡದಲ್ಲಿ ನಡೆಯುತ್ತಿದ್ದ 38ನೇ ರಾಷ್ಟ್ರೀಯ ಕ್ರೀಡಾಕೂಟ ಮುಕ್ತಾಯ

ಉತ್ತರಾಖಂಡ : ಉತ್ತರಾಖಂಡದಲ್ಲಿ ಆಯೋಜಿಸಲಾದ 38ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಇಂದು ಅಧಿಕೃತ ತೆರೆಬಿತ್ತು. ಜನವರಿ 28ಕ್ಕೆ ಪ್ರಾರಂಭವಾಗಿದ್ದ ಕ್ರೀಡಾಕೂಟವು ಒಟ್ಟು 18 ದಿನಗಳ ಕಾಲ ನಡೆಯಿತು. ದೇಶಾದ್ಯಂತ 16,000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.

ಕರ್ನಾಟಕ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ಹೆಚ್ಚಿನ ಪದಕಗಳನ್ನು ಗೆಲ್ಲುವ ಮೂಲಕ ದಾಖಲೆ ಬರೆಯಿತು. 2023ರಲ್ಲಿ 32 ಚಿನ್ನ ಗೆದ್ದ ರಾಜ್ಯ, ಈ ಬಾರಿ 34 ಪದಕಗಳನ್ನು ಪಡೆದು 5ನೇ ಸ್ಥಾನಕ್ಕೆ ತಲುಪಿದೆ. ಕಳೆದ ವರ್ಷ ಪದಕ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿತ್ತು.

ಕರ್ನಾಟಕ ಒಟ್ಟು 80 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ 34 ಚಿನ್ನ, 18 ಬೆಳ್ಳಿ, 28 ಕಂಚು ಸೇರಿವೆ. ಈ ಪಟ್ಟಿಯಲ್ಲಿ ಸರ್ವಿಸ್​ ಸ್ಪೋರ್ಟ್​ ಕಂಟ್ರೋಲ್​ ಬೋರ್ಡ್​ ಅಗ್ರಸ್ಥಾನದಲ್ಲಿದೆ. 68 ಚಿನ್ನ, 26ಬೆಳ್ಳಿ, 27 ಕಂಚು ಸಮೇತ ಒಟ್ಟು 121 ಪದಕಗಳನ್ನು ಜಯಿಸಿದೆ.

ಹೆಚ್ಚು ಪದಕಗಳನ್ನು ಮಹಾರಾಷ್ಟ್ರ ಗೆದ್ದುಕೊಂಡಿದೆ. 54 ಚಿನ್ನ, 71 ಬೆಳ್ಳಿ, 76 ಕಂಚು ಸೇರಿ 201 ಪದಕಗಳನ್ನು ಪಡೆದಿದೆ. ಆದರೆ ಚಿನ್ನದ​ ಪದಕದ ವಿಚಾರದಲ್ಲಿ ಎರಡನೇ ಸ್ಥಾನದಲ್ಲಿದೆ. ಉಳಿದಂತೆ ಹರಿಯಾಣ (153), ಮಧ್ಯ ಪ್ರದೇಶ (82) ರಾಜ್ಯಗಳು ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿವೆ.

ಆಕ್ವಿಟಿಕ್ಸ್​ ಕ್ರೀಡೆಯಲ್ಲಿ ಕರ್ನಾಟಕ ಹೆಚ್ಚಿನ ಪದಕಗಳನ್ನು ಪಡೆದುಕೊಂಡಿದೆ. 22 ಚಿನ್ನ, 10 ಬೆಳ್ಳಿ, 5 ಕಂಚುಸಮೇತ 37 ಪದಕ ಜಯಿಸಿದೆ.

 ಪುರುಷರ 10 ಮೀಟರ್​ ಏರ್​ ಪಿಸ್ತೂಲ್​ ಸ್ಪರ್ಧೆಯಲ್ಲಿ ಬೆಂಗಳೂರಿನ ಕಿರಿಯ ಶೂಟರ್ ಜೊನಾಥನ್​ ಆ್ಯಂಟನಿ ದಾಖಲೆ ಬರೆದಿದ್ದರು. ಕಳೆದ ವರ್ಷ ಪ್ಯಾರಿಸ್​ನಲ್ಲಿ ನಡೆದ ಒಲಿಂಪಿಕ್ಸ್​ ಶೂಟಿಂಗ್​ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದ ಸರಬ್ಜೋತ್ ಸಿಂಗ್ ಮತ್ತು ಅನುಭವಿ ಶೂಟರ್​ ಸೌರಭ್ ಚೌಧರಿ ಅವರನ್ನು ಸೋಲಿಸಿ ಚಿನ್ನ ಜಯಿಸಿದ್ದರು.

ಕ್ರೀಡಾಕೂಟದ ಸಮಾರೋಪ ಸಮಾರಂಭವು ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ, ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​ಅಧ್ಯಕ್ಷೆ ಪಿ.ಟಿ.ಉಷಾ ಭಾಗಿಯಾಗಿದ್ದರು.

Category
ಕರಾವಳಿ ತರಂಗಿಣಿ