ಹೈದರಬಾದ್ : ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಿರುವ ಕ್ರೇಜ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಉಭಯ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ರದ್ದಾಗಿ ವರ್ಷಗಳೇ ಕಳೆದಿವೆ. ಸದ್ಯ, ಇತ್ತಂಡಗಳು ಐಸಿಸಿ ಆಯೋಜಿತ ವಿಶ್ವಕಪ್ನಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.
2023ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಉಭಯ ತಂಡಗಳು ಎದುರುಬದುರಾಗಿದ್ದವು. ಇದೀಗ 15 ತಿಂಗಳ ನಂತರ ಎರಡೂ ತಂಡಗಳು ಪರಸ್ಪರ ಸೆಣಸಲಿವೆ. ಇದೇ ತಿಂಗಳು, ಫೆಬ್ರವರಿ 19ರಿಂದ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ-ಪಾಕ್ ನಡುವೆ ಹೈ ವೋಲ್ಟೇಜ್ ಮ್ಯಾಚ್ ನಡೆಯಲಿದೆ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿದೆ. ಆದರೆ, ಭಾರತ ಪಾಕ್ಗೆ ತೆರಳಲು ಹಿಂದೇಟು ಹಾಕುತ್ತಿರುವ ಕಾರಣ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗುತ್ತಿದೆ.
ಭಾರತ ಆಡುವ ಎಲ್ಲಾ ಪಂದ್ಯಗಳು ಪಾಕಿಸ್ತಾನದ ಬದಲಿಗೆ ದುಬೈನಲ್ಲಿ ನಡೆಯಲಿವೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗಿಯಾಗುತ್ತಿವೆ. ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗ್ರೂಪ್ನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಬಾಂಗ್ಲಾದೇಶ ಇವೆ. ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ತಂಡಗಳಿವೆ.