ಮಹಾರಾಷ್ಟ್ರ : ಸಿಡಿಲ ಮರಿ ಅಭಿಷೇಕ್ ಶರ್ಮಾರ ಅಬ್ಬರದ ಬ್ಯಾಟಿಂಗ್ನಿಂದಾಗಿ ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಭಾರತ ತಂಡ 150 ರನ್ಗಳಿಂದ ಗೆಲುವು ಸಾಧಿಸಿತು. ಇದರಿಂದ ಸರಣಿಯನ್ನು 4-1 ರಲ್ಲಿ ತನ್ನದಾಗಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಅಭಿಷೇಕ್ ಶರ್ಮಾರ ಶತಕದ ನೆರವಿನಿಂದ 9 ವಿಕೆಟ್ಗೆ 247 ರನ್ ಬೃಹತ್ ಮೊತ್ತ ದಾಖಲಿಸಿತು. ಇದಕ್ಕುತ್ತರವಾಗಿ ಆಂಗ್ಲ ಪಡೆಯು ಬ್ಯಾಟಿಂಗ್ ವೈಫಲ್ಯದಿಂದ 10.3 ಓವರ್ಗಳಲ್ಲಿ 97 ರನ್ಗೆ ಸರ್ವಪತನ ಕಂಡು ಹೀನಾಯ ಸೋಲೊಪ್ಪಿಕೊಂಡಿತು.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನೆರೆದಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಅಭಿಷೇಕ್ ಶರ್ಮಾ ರಸದೌತಣ ಉಣಬಡಿಸಿದರು. ಕ್ರೀಡಾಂಗಣದ ಮೂಲೆಮೂಲೆಗೂ ಚೆಂಡನ್ನು ಬಡಿದಟ್ಟಿದ ಎಡಗೈ ಬ್ಯಾಟರ್ ದಾಖಲೆಯ ಶತಕ ಬಾರಿಸಿದರು. 54 ಎಸೆತಗಳಲ್ಲಿ 135 ರನ್ ಗಳಿಸಿದರು. ಇದರಲ್ಲಿ 13 ಭರ್ಜರಿ ಸಿಕ್ಸರ್, 7 ಬೌಂಡರಿಗಳಿದ್ದವು.
247 ರನ್ಗಳ ಬೃಹತ್ ಮೊತ್ತ ಕಂಡ ಇಂಗ್ಲೆಂಡ್ ಆಟಗಾರರ ಬ್ಯಾಟಿಂಗ್ ಬಸವಳಿದಿತ್ತು. ಫಿಲಿಫ್ ಸಾಲ್ಟ್ 55 ರನ್ ಗಳಿಸಿದರೆ, ಉಳಿದ 9 ಆಟಗಾರರು 42 ರನ್ ಗಳಿಸಿದರು. ಇದರಿಂದ ತಂಡ 11 ಓವರ್ಗಳಲ್ಲಿಯೇ ಗಂಟುಮೂಟೆ ಕಟ್ಟಿತು.