ಹೈದೆರಾಬಾದ್ : ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮಹಿಳಾ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತೀಯ ವನಿತೆಯರು 9 ವಿಕೆಟ್ಗಳಿಂದ ಜಯಭೇರಿ ಬಾರಿಸಿದ್ದಾರೆ. ಇದರೊಂದಿಗೆ ಸತತ ಎರಡನೇ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ 2023ರಲ್ಲಿ ನಡೆದಿದ್ದ ವಿಶ್ವಕಪ್ನಲ್ಲೂ ಭಾರತ ಗೆಲುವು ಸಾಧಿಸಿತ್ತು.
ಮಲೇಷ್ಯಾದ ಕೌಲಾಲಂಪುರ್ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 82 ರನ್ಗಳ ಸಮಾನ್ಯ ಗುರಿಯನ್ನು ಬೆನ್ನತ್ತಿದ ಭಾರತೀಯ ವನಿತೆಯರು 11.2 ಓವರ್ಗಳಲ್ಲೇ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾದರು. ಗೊಂಗಡಿ ತ್ರಿಷಾ (44) ಮತ್ತು ಸನಿಕಾ ಚಾಲ್ಕೆ (26) ಅಜೇಯವಾಗಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.
ಇದಕ್ಕೂ ಮುನ್ನ ಭಾರತಕ್ಕೆ ಬೃಹತ್ ಗುರಿ ನೀಡುವ ಉದ್ದೇಶದಿಂದಾಗಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಮಹಿಳಾ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಭಾರತೀಯ ಸ್ಪಿನ್ ದಾಳಿಗೆ ಸಿಲುಕಿ ಅಲ್ಪ ಮೊತ್ತಕ್ಕೆ ಪತನ ಕಂಡಿತು. ತಂಡದ ಪರ ವ್ಯಾನ್ ವೂರ್ಸ್ಟ್ (23), ಕೌಲಿಂಗ್ (15), ಕರ್ಬು ಮೆಸೊ (10) ಹೊರತುಪಡಿಸಿ ಉಳಿದ ಬ್ಯಾಟರ್ಗಳು ಎರಡಂಕಿ ಸ್ಕೋರ್ ಗಳಿಸಲು ಸಹ ಸಾಧ್ಯವಾಗಲಿಲ್ಲ.
ಭಾರತದ ಪರ ಗೊಂಗಡಿ ತ್ರಿಷಾ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರು 4 ಓವರ್ಗಳಲ್ಲಿ 15 ರನ್ ಮಾತ್ರ ನೀಡಿ ವಿಕೆಟ್ ಪಡೆದರು. ಉಳಿದಂತೆ ವೈಷ್ವಿ ಶರ್ಮಾ, ಆಯುಷಿ ಶುಕ್ಲಾ, ಪಾರುಣಿಕ ಸಿಸೊಡಿಯಾ ತಲಾ 2 ವಿಕೆಟ್ ಕಬಳಿಸಿದರೆ, ಶಭನಮ್ ಶಕಿಲ್ 1 ವಿಕೆಟ್ ಉರುಳಿಸಿದರು. ಇದರೊಂದಿಗೆ ಭಾರತ ಟೂರ್ನಿಯಲ್ಲಿ ಸೋಲಿಲ್ಲದೆ ವಿಶ್ವಕಪ್ ಎತ್ತಿ ಹಿಡಿದು ದಾಖಲೆ ಬರೆದಿದೆ.