ಚೆನ್ನೈ : ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ನಡೆದ ಪಂದ್ಯಲ್ಲಿ ಇಂಗ್ಲೆಂಡ್ ನೀಡಿದ್ದ 166 ರನ್ ಗಳ ಗುರಿ ಬೆನ್ನತ್ತಿದ್ದ ಸೂರ್ಯ ಪಡೆ ತಿಲಕ್ ವರ್ಮಾ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ರೋಚಕ ಗೆಲುವು ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದಿದ್ದ ಇಂಗ್ಲೆಂಡ್ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ತಂಡದ ಪರ ನಾಯಕ ಬಟ್ಲರ್ ಮತ್ತೊಮ್ಮೆ ಅಮೋಘ ಪ್ರದರ್ಶನ ನೀಡಿ, 30 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 45 ರನ್ ಚಚ್ಚಿದರು. ಅರ್ಧಶತಕದ ಹೊಸ್ತಿಲಲ್ಲಿದ್ದ ಅವರಿಗೆ ಅಕ್ಷರ್ ಪಟೇಲ್ ಶಾಕ್ ನೀಡಿದರು. ಭರ್ಜರಿ ಬೌಲಿಂಗ್ ಮೂಲಕ ವಿಕೆಟ್ ಉರುಳಿಸಿದರು.
ಬಳಿಕ ಬಂದ ಬ್ಯಾಟರ್ಗಳು ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಅಂತಿಮವಾಗಿ ಬ್ರೈಡನ್ ಕಾರ್ಸ್ 31 ರನ್ ಗಳಿಸಿದ್ದು ತಂಡದ ಸ್ಕೋರ್ ಸುಧಾರಿಸಲು ಸಾಧ್ಯವಾಯ್ತು.
ಆರಂಭದಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡಿದ್ದ ಆಂಗ್ಲರು ಪವರ್ ಪ್ಲೇನಲ್ಲಿ 50ಕ್ಕೂ ಅಧಿಕ ರನ್ ಚಚ್ಚಿ ದೊಡ್ಡ ಸ್ಕೋರ್ ಕಲೆ ಹಾಕುವ ಸೂಚನೆ ನೀಡಿದ್ದರು. ಆದರೆ ಇದಕ್ಕೆ ಅವಕಾಶ ಮಾಡಿಕೊಡದ ಭಾರತೀಯ ಬೌಲರ್ಗಳು ಆಂಗ್ಲರ ಬ್ಯಾಟಿಂಗ್ ವೇಗಕ್ಕೆ ತಡೆಯೊಡ್ಡಿದರು. ಇದರಿಂದಾಗಿ 165 ರನ್ ಗಳಿಸಲಷ್ಟೇ ಇಂಗ್ಲೆಂಡ್ ಶಕ್ತವಾಯ್ತು.
ಮತ್ತೊಂದೆಡೆ 166 ರನ್ ಗುರಿಯೊಂದಿಗೆ ಕಣಕ್ಕೆ ಇಳಿದ ಟೀಂ ಇಂಡಿಯಾ ಆರಂಭದಲ್ಲೇ ತತ್ತರಿಸಿತು. 10 ಓವರ್ ಮುಕ್ತಾಯದ ವೇಳೆಗೆ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ (5), ಅಭಿಷೇಕ್ ಶರ್ಮಾ (12), ಸೂರ್ಯ ಕುಮಾರ್ ಯಾದವ್ (12), ಧ್ರುವ್ ಜುರೆಲ್ (4), ಹಾರ್ದಿಕ್ ಪಾಂಡ್ಯ (7), ಅಕ್ಷರ್ ಪಟೇಲ್ (2) ಅಲ್ಪಮೊತ್ತಕ್ಕೆ ಪೆವಿಲಿಯನ್ ಸೇರಿದ್ದರಿಂದ ತಂಡಕ್ಕೆ ಸೋಲಿನ ಭೀತಿ ಎದುರಾಗಿತ್ತು.