ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದ 50 ನೇ ವಾರ್ಷಿಕೋತ್ಸವದ ಆಚರಣೆ ಭಾಗವಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಗುರುವಾರ ಸ್ಟೇಡಿಯಂನಲ್ಲಿ 'ಅತಿದೊಡ್ಡ ಕ್ರಿಕೆಟ್ ಬಾಲ್ ವಾಕ್ಯ' ರಚಿಸಿ ಗಿನ್ನೆಸ್ ವಿಶ್ವ ದಾಖಲೆ ಮಾಡುವ ಮೂಲಕ ತನ್ನ ರೋಮಾಂಚಕ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ಸೇರಿಸಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ 1975 ರಲ್ಲಿ ಆಡಿದ ಕ್ರೀಡಾಂಗಣದ ಮೊದಲ ಅಂತಾರಾಷ್ಟ್ರೀಯ ಪಂದ್ಯದ ವಾರ್ಷಿಕೋತ್ಸವದಂದು ಈ ದಾಖಲೆಯನ್ನು ರಚಿಸಲಾಯಿತು. 1975 ರ ಜನವರಿ 23 ರಿಂದ 29 ರವರೆಗೆ ಇಲ್ಲಿ ಆಡಲಾದ ಮೊದಲ ಅಂತಾರಾಷ್ಟ್ರೀಯ ಸ್ಮರಣೀಯ ಟೆಸ್ಟ್ ಪಂದ್ಯದಲ್ಲಿ ಭಾರತವು ವೆಸ್ಟ್ ಇಂಡೀಸ್ ಅನ್ನು ಎದುರಿಸಿತ್ತು.
ಎಂಸಿಎ ಈ ದಾಖಲೆಯನ್ನು ಆ ಪಂದ್ಯದಲ್ಲಿ ಶತಕ ಗಳಿಸಿದ ದಿವಂಗತ ಏಕನಾಥ್ ಸೋಲ್ಕರ್ ಮತ್ತು ಕ್ರೀಡೆಗೆ ಅಸಾಧಾರಣ ಕೊಡುಗೆಗಳನ್ನು ನೀಡಿದ ಮುಂಬೈನ ಇತರ ಅಗಲಿದ ಆಟಗಾರರಿಗೆ ಅರ್ಪಿಸಿದೆ.
Fifty Years of Wankhede Stadium ಎಂಬ ಇಂಗ್ಲಿಷ್ ವಾಕ್ಯವನ್ನು 14,505 ಲೆದರ್ ಬಾಲ್ಗಳನ್ನು ಬಳಸಿ ಬರೆಯುವ ಮೂಲಕ ಎಂಸಿಎ ವಿಶಿಷ್ಟ ಗಿನೆಸ್ ದಾಖಲೆಯನ್ನು ಬರೆದಿದೆ. ಎಂಸಿಎ ಅಧ್ಯಕ್ಷ ಅಜಿಂಕ್ಯ ನಾಯಕ್ ಮತ್ತು ಪದಾಧಿಕಾರಿಗಳು ಮತ್ತು ಅಪೆಕ್ಸ್ ಕೌನ್ಸಿಲ್ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.