ನವದೆಹಲಿ : ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತ ಹೀನಾಯ ಸೋಲನಭವಿಸಿತು. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-1 ಅಂತರದಿಂದ ಸೋಲನುಭವಿಸಿದ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಿಂದಲೂ ಹೊರಬಿದ್ದಿದೆ. ಇದಕ್ಕೆ ಬ್ಯಾಟಿಂಗ್ ವೈಫಲ್ಯವೇ ಪ್ರಮುಖ ಕಾರಣವಾಗಿತ್ತು.
ಟೀಂ ಇಂಡಿಯಾದ ಈ ಸೋಲಿನ ಬೆನ್ನಲ್ಲೆ ಬಿಸಿಸಿಐ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಈ ಹಿನ್ನೆಲೆ ಇತ್ತೀಚೆಗೆ ನಡೆದ ಬಿಸಿಸಿಐ ಪರಿಶೀಲನಾ ಸಭೆಯಲ್ಲಿ ಕೆಲ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗಿದ್ದು, ಅದರಲ್ಲಿ ಕ್ರಿಕೆಟಿಗರ ಕುಟುಂಬಕ್ಕೆ ನೀಡಿರುವ ಸೌಲಭ್ಯಗಳನ್ನು ಕಡಿತಗೊಳಿಸುವ ಬಗ್ಗೆಯೂ ನಿರ್ಧರಿಸಲಾಗಿದೆ. ಜೊತೆಗೆ ಕೋಚ್ ಗೌತಮ್ ಗಂಭೀರ್ಗೆ ನೀಡಲಾಗಿದ್ದ ಕೆಲ ಸೌಲಭ್ಯಗಳಿಗೆ ಕತ್ತರಿ ಬೀಳಲಿದೆ ಎಂದು ಕ್ರಿಕೆಟ್ ಮೂಲಗಳು ಬಹಿರಂಗ ಪಡಿಸಿವೆ.
ಬಿಸಿಸಿಐ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ಈ ಹಿಂದೆ ಯಾರಿಗೂ ನೀಡದ ಅಧಿಕಾರ ಮತ್ತು ಸ್ವಾತಂತ್ರ್ಯಗಳನ್ನು ಬಿಸಿಸಿಐ ನೀಡಿತ್ತು. ತಂಡದ ಆಯ್ಕೆಯ ಜೊತೆಗೆ, ಸಹಾಯಕ ತರಬೇತುದಾರರನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಇಷ್ಟೆಲ್ಲ ಮಾಡಿದರೂ ಟೀಂ ಇಂಡಿಯಾದಿಂದ ನಿರೀಕ್ಷಿಸಿದ ಫಲಿತಾಂಶ ಸಾಧಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಗಂಭೀರ್ಗೆ ನೀಡಲಾಗಿದ್ದ ಸ್ವಾತಂತ್ರ್ಯವನ್ನು ಕಡಿತಗೊಳಿಸಲು ಮುಂದಾಗಿದೆ.
ಕುಟುಂಬ ಸೌಲಭ್ಯ ಕಟ್: ಹಿರಿಯ ಆಟಗಾರರಾದ ರೋಹಿತ್ ಮತ್ತು ವಿರಾಟ್ ಕೊಹ್ಲಿ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಈ ವಿಷಯದಲ್ಲಿ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ ಎಂದು ತೋರುತ್ತದೆ. 2019 ರಿಂದ, ಭಾರತದ ಹಿರಿಯ ಆಟಗಾರರು ಕ್ರಿಕೆಟ್ ಪಂದ್ಯಗಳಿಗಾಗಿ ವಿದೇಶಿ ಪ್ರವಾಸಕ್ಕೆ ತೆರಳಿದರೆ ಕುಟುಂಬ ಸದಸ್ಯರು (ಪತ್ನಿ, ಮಕ್ಕಳು) ಅವರೊಂದಿಗೆ ಹೋಗಲು ಅನುಮತಿ ನೀಡಿತ್ತು.