ನವದೆಹಲಿ : ಪಾಕಿಸ್ಥಾನದ ವಿರುದ್ಧ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ದ.ಆಫ್ರಿಕಾ ಗೆಲುವು ಸಾಧಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್ಗೆ ಪ್ರವೇಶ ಪಡೆದಿದೆ.
ಈ ಪಂದ್ಯದಲ್ಲಿ 148 ರನ್‌ಗಳ ಕಡಿಮೆ ಮೊತ್ತದ ಗುರಿಯನ್ನು ಪಡೆದಿದ್ದ ದಕ್ಷಿಣ ಆಫ್ರಿಕಾ 99 ರನ್‌ಗಳಿಗೆ ಎಂಟು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಮಾರ್ಕೊ ಜಾನ್ಸೆನ್ ಮತ್ತು ಕಗಿಸೊ ರಬಾಡ 51 ರನ್‌ಗಳ ಅಜೇಯ ಜೊತೆಯಾಟ ಆಡಿ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು.
ರಬಾಡ 31 ಮತ್ತು ಜಾನ್ಸೆನ್ 16 ರನ್ ಗಳಿಸಿ ಅಜೇಯವಾಗಿ ಉಳಿದರು. ಪಾಕ್ ಪರ ಮೊಹಮ್ಮದ್ ಅಬ್ಬಾಸ್ ಆರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಂಡಕ್ಕೆ ಜಯ ತಂದುಕೊಡಲು ಪ್ರಯತ್ನಿಸಿದರಾದರೂ, ಜಾನ್ಸೆನ್-ರಬಾಡ ಅವರ ಜೋಡಿ ಪಾಕ್ನಿಂದ ಗೆಲುವು ಕಸಿದುಕೊಂಡಿತು. ಇದರೊಂದಿಗೆ ಪ್ರಸ್ತುತ ಋತುವಿನಲ್ಲಿ WTC ಫೈನಲ್ ತಲುಪಿದ ಮೊದಲ ತಂಡವಾಗಿ ದ.ಆಫ್ರಿಕಾ ಸಾಧನೆ ಮಾಡಿತು.