ನ್ಯೂಯಾರ್ಕ್: ಭಾರತದ ಗ್ರ್ಯಾಂಡ್‌ಮಾಸ್ಟರ್ ಕೊನೇರು ಹಂಪಿ ಅವರು ಇಂಡೋನೇಷ್ಯಾದ ಐರಿನ್ ಸುಕಂದರ್ ಅವರನ್ನು ಮಣಿಸಿ ಮಹಿಳಾ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ 37 ವರ್ಷದ ಕೊನೇರು ಹಂಪಿ ಅವರು ಚೀನಾದ ಜು ವೆನ್ಜುನ್ ಬಳಿಕ ಮಹಿಳೆಯರ ವಿಭಾಗದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ಎರಡನೇ ಚೆಸ್ ಆಟಗಾರ್ತಿಯಾಗಿದ್ದಾರೆ.
ನ್ಯೂಯಾರ್ಕ್‌ನಲ್ಲಿ ನಡೆದ ಪಂದ್ಯಾವಳಿಯ ಫೈನಲ್ನಲ್ಲಿ 11 ಅಂಕಗಳಲ್ಲಿ 8.5 ಅಂಕಗಳನ್ನು ಕಲೆ ಹಾಕುವ ಮೂಲಕ ಅಗ್ರಸ್ಥಾನ ಗಳಿಸಿದರು. 2019ರಲ್ಲಿ ಜಾರ್ಜಿಯಾದಲ್ಲಿ ನಡೆದ ಟೂರ್ನಿಯಲ್ಲೂ ಕೊನೇರು ಅವರು ಪ್ರಶಸ್ತಿ ಗೆದ್ದಿದ್ದರು. ಅದರ ನಂತರ ಇದು ಅವರ ಎರಡನೇ ಗೆಲುವಾಗಿದೆ.
ಭಾರತದ ಮಟ್ಟಕ್ಕೆ ಕೊನೇರು ಹಂಪಿ ಅವರ ಈ ಗೆಲುವು ಚೆಸ್ನಲ್ಲಿ ಐತಿಹಾಸಿಕ ಮೈಲಿಗಲ್ಲಾಗಿದೆ. ಡಿಂಗ್ ಲಿರೆನ್ ಅವರನ್ನು ಸೋಲಿಸಿ, ಭಾರತದ ಡಿ.ಗುಕೇಶ್ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ ಎರಡು ವಾರದಲ್ಲಿ ಕೊನೇರು ಹಂಪಿ ಅವರು ಚಾಂಪಿಯನ್ ಪಟ್ಟ ಅಲಂಕರಿಸಿರುವುದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ. ಡಿ.ಗುಕೇಶ್ ಅವರು, ವಿಶ್ವನಾಥನ್ ಆನಂದ್ ಬಳಿಕ ಟೂರ್ನಮೆಂಟ್ ಗೆದ್ದ ಎರಡನೇ ಭಾರತೀಯರಾಗಿದ್ದಾರೆ. ಜೊತೆಗೆ ವಿಶ್ವ ಚೆಸ್ ಚಾಂಪಿಯನ್ ಕಿರೀಟ ಗೆದ್ದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.