ಹೈದೆರಾಬಾದ್ : ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟಿ20 ಸರಣಿಯ 3ನೇ ಪಂದ್ಯದಲ್ಲಿ ಭಾರತದ ವನಿತೆಯರು ಜಯಭೇರಿ ಭಾರಿಸಿದ್ದಾರೆ. 3 ಪಂದ್ಯಗಳ ಟಿ20 ಸರಣಿಯ ಭಾಗವಾಗಿ ಇಂದು ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಸ್ಮೃತಿ ಮಂಧಾನ ಪಡೆ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲು ಭರ್ಜರಿ ಪ್ರದರ್ಶನ ತೋರಿ ಕೆರೆಬಿಯನ್ನರ ಸೈನ್ಯವನ್ನು 60 ರನ್ಗಳಿಂದ ಮಣಿಸಿತು. ಇದರೊಂದಿಗೆ 2-1 ಅಂತರದಲ್ಲಿ ಟಿ20 ಸರಣಿಯನ್ನು ಗೆದ್ದುಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, ಸ್ಮೃತಿ ಮಂದಾನ (77) ಮತ್ತು ರಿಚಾ ಘೋಶ್ (54) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 217 ರನ್ಗಳನ್ನು ಕಲೆ ಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 157 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಹೆನ್ರಿ (43) ಅಗ್ರ ಸ್ಕೋರರ್ ಎನಿಸಿಕೊಂಡಿರು. ಡಾಟಿನ್ (25) ಮತ್ತು ಹ್ಯಾಲಿ ಮ್ಯಾಥ್ಯೂಸ್ (22), ಜೋಸೆಫ್ (11) ಮತ್ತು ಕ್ಯಾಂಪ್ಬೆಲ್ (17) ತಂಡಕ್ಕೆ ರನ್ ಕೊಡುಗೆ ನೀಡಿದರು ಗೆಲುವಿನ ದಡಕ್ಕೆ ಕೊಂಡುಯ್ಯಲು ಸಾಧ್ಯವಾಗಲಿಲ್ಲ.
ರಾಧಾ ಯಾದವ್ ಮಾರಕ ಬೌಲಿಂಗ್: ಭಾರತದ ಪರ ರಾಧಾ ಯಾದವ್ ವಿಧ್ವಂಸಕ ಬೌಲಿಂಗ್ ಮಾಡಿದರು, ಇವರ ಮಾರಕ ದಾಳಿಗೆ ಸಿಲುಕಿದ ವೆಸ್ಟ್ ಇಂಡೀಸ್ ಅಲ್ಪಮೊತ್ತಕ್ಕೆ ಕುಸಿಯಿತು. ನಾಯಕಿ ಮ್ಯಾಥ್ಯು ಹೇಲಿ, ಅಲ್ಲೇಯೆನಿ, ಗಜ್ನಬಿ, ಝಾಹಿದ ಜೇಮ್ಸ್ ವಿಕೆಟ್ ಉರುಳಿಸಿ ತಂಡದ ಪರ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.