ಅಡಿಲೇಡ್ : ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದೆ.
ಅಡಿಲೇಡ್ನಲ್ಲಿ ನಡೆದ ಹಗಲು/ರಾತ್ರಿಯ ಪಿಂಕ್ ಬಾಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತೊಮ್ಮೆ ಪಾರಮ್ಯ ಸಾಧಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ 180 ರನ್ಗಳಿಗೆ ಸರ್ವಪತನ ಕಂಡಿದ್ದ ಭಾರತ 157 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿತು. ಇದರಲ್ಲೂ ಭಾರತೀಯ ಬ್ಯಾಟರ್ಗಳು ರನ್ ಗಳಿಸುವಲ್ಲಿ ವಿಫಲರಾದ ಕಾರಣ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 175ರನ್ ಗಳಿಸಲಷ್ಟೇ ಶಕ್ತವಾಯಿತು. ಆಸ್ಟ್ರೇಲಿಯಾಗೆ ಕೇವಲ 19ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಆತಿಥೇಯ ತಂಡ ಸುಲಭವಾಗಿ ಸಾಧಿಸಿ 10 ವಿಕೆಟ್‌ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 1-1 ಅಂತರದಿಂದ ಸಮಬಲ ಸಾಧಿಸಿತು.
ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ನಲ್ಲಿ ಭಾರತ ಸೋಲನುಭವಿಸುವುದರ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲೂ ಭಾರೀ ಹಿನ್ನಡೆ ಅನುಭವಿಸಿದೆ. ಈವರೆಗೆ ಅಗ್ರಸ್ಥಾನದಲ್ಲಿದ್ದ ಭಾರತ ಇದೀಗ 3ನೇ ಸ್ಥಾನಕ್ಕೆ ಕುಸಿದಿದೆ. ಭಾರತವನ್ನು ಮಣಿಸಿ ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರಿದೆ. WTC ಅಂಕಪಟ್ಟಿಯಲ್ಲಿ ಕಾಂಗರೂ ಪಡೆ 60.71 ಶೇಕಡವಾರು ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದೆ. ಈ ಪಂದ್ಯವನ್ನು ಸೋಲುತ್ತಿದ್ದಂತೆ ಭಾರತ 59.26 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಇಳಿದಿದೆ. ಸದ್ಯ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ.