ಅಡಿಲೇಡ್ : ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದಿನಿಂದ ಎರಡನೇ ಟೆಸ್ಟ್ ಪ್ರಾರಂಭವಾಗಿದೆ. ಅಡಿಲೇಡ್ನಲ್ಲಿ ನಡೆಯುತ್ತಿರುವ ಈ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಮೊದಲ ಇನ್ನಿಂಗ್ಸ್ನಲ್ಲಿ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್, ಸ್ಟಾರ್ಕ್ ಎಸೆದ ಮೊದಲ ಎಸೆತದಲ್ಲೇ ಎಲ್ಬಿ ಬಲೆಗೆ ಬಿದ್ದು ಶೂನ್ಯಕ್ಕೆ ಪೆವಿಲಿಯನ್ ಸೇರಿದ್ದಾರೆ.
ಈ ಪಂದ್ಯದಲ್ಲಿ ಭಾರತ 3 ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ರೋಹಿತ್ ಶರ್ಮಾ, ಶುಭಮನ್ ಗಿಲ್ ಮತ್ತು ರವಿಚಂದ್ರನ್ ಅಶ್ವಿನ್ ತಂಡಕ್ಕೆ ಮರಳಿದ್ದು, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್ ಮತ್ತು ವಾಷಿಂಗ್ಟನ್ ಸುಂದರ್ ಹೊರಗುಳಿದಿದ್ದಾರೆ. ಕಾಂಗರೂ ಪಡೆ ಕೂಡ ಒಂದು ಬದಲಾವಣೆಯೊಂದಿಗೆ ಪ್ರವೇಶಿಸಿದೆ. ಗಾಯಕ್ಕೆ ತುತ್ತಾಗಿರುವ ಜೋಶ್ ಹೇಜಲ್‌ವುಡ್ ಬದಲಿಗೆ ಸ್ಕಾಟ್ ಬೋಲ್ಯಾಂಡ್‌ಗೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
10 ವರ್ಷಗಳ ಹಿಂದೆ, ಆಸ್ಟ್ರೇಲಿಯಾದ ಯುವ ಬ್ಯಾಟ್ಸ್‌ಮನ್ ಫಿಲಿಪ್ ಹ್ಯೂಸ್ ದೇಶೀಯ ಪಂದ್ಯವೊಂದರಲ್ಲಿ ಚೆಂಡು ತಲೆಗೆ ಬಡಿದು ಸಾವನ್ನಪ್ಪಿದ್ದರು. ಆಗ ಅವರಿಗೆ ಕೇವಲ 25 ವರ್ಷವಾಗಿತ್ತು. ಈ ದುರಂತ ಘಟನೆ ನಡೆದು ನ.27ಕ್ಕೆ 10 ವರ್ಷ ಕಳೆದಿದೆ. ಇದಲ್ಲದೆ, ಆಸ್ಟ್ರೇಲಿಯಾದ ಮಾಜಿ ದಿಗ್ಗಜ ಕ್ರಿಕೆಟಿಗ ಇಯಾನ್ ರೆಡ್‌ಪಾತ್ ಡಿಸೆಂಬರ್ 1 ರಂದು ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು ಅವರ ನಿಧನಕ್ಕೂ ಸಂತಾಪ ಸೂಚಿಸಲು ಕಾಂಗರೂ ತಂಡ ಈ ಆರ್ಮ್ ಬ್ಯಾಂಡ್ ಧರಿಸಿದೆ.