ಆಸ್ಟ್ರೇಲಿಯಾ : ಬಾರ್ಡರ್ ಗವಾಸ್ಕರ್ ಟ್ರೋಫಿಯ ಭಾಗವಾಗಿ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಹೀನಾಯ ಸೋಲ ಕಂಡಿರುವ ಆಸ್ಟ್ರೇಲಿಯಾಗೆ ಮತ್ತೊಂದು ಆಘಾತ ಎದುರಾಗಿದೆ. ಆಸೀಸ್ನ ಪ್ರಮುಖ ಬೌಲರ್ ಗಾಯಕ್ಕೆ ತುತ್ತಾಗಿ ಎರಡನೇ ಟೆಸ್ಟ್‌ನಿಂದ ಹೊರ ಬಿದ್ದಿದ್ದಾರೆ.
ಪರ್ತ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಅದ್ಬುತ ಪ್ರದರ್ಶನ ತೋರಿದ್ದ ಆಸೀಸ್ನ ಈ ಬೌಲರ್ ಹೆಚ್ಚು ವಿಕೆಟ್ಗಳನ್ನು ಪಡೆದು ತಂಡದ ಪ್ರಮುಖ ಬೌಲರ್ ಎನಿಸಿಕೊಂಡಿದ್ದರು. ಆದರೆ, ಎರಡನೇ ಟೆಸ್ಟ್ಗೆ ಅಲಭ್ಯರಾಗಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಹೌದು ಮೊದಲ ಪಂದ್ಯದಲ್ಲಿ ಮಿಂಚಿದ್ದ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಬೆನ್ನು ನೋವಿಗೆ ತುತ್ತಾಗಿದ್ದು, ಎರಡನೇ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ.
ನೋವಿನಿಂದ ಬಳಲುತ್ತಿರುವ ಅವರನ್ನು ಪರೀಕ್ಷಿಸಿದ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿರುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಅಲ್ಲದೇ ಹ್ಯಾಜಲ್‌ವುಡ್ ಎರಡನೇ ಟೆಸ್ಟ್‌ನಿಂದ ಹೊರಗುಳಿಯುವುದಾಗಿಯೂ ಹೇಳಿದೆ. ಒಂದು ವೇಳೆ ಗಾಯದ ತೀವ್ರತೆ ಕಡಿಮೆಯಾಗದಿದ್ದರೇ ಹ್ಯಾಜಲ್‌ವುಡ್ ಇಡೀ ಸರಣಿಯಿಂದಲೇ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹ್ಯಾಜಲ್‌ವುಡ್ ಮೊದಲ ಟೆಸ್ಟ್ನಲ್ಲಿ ಐದು ವಿಕೆಟ್ ಪಡೆದು ಅದ್ಭುತ ಪ್ರದರ್ಶನ ನೀಡಿದ್ದರು. ಈ ಪಂದ್ಯದಲ್ಲಿ ತಂಡದ ಇತರ ಬೌಲರ್‌ಗಳಿಗಿಂತ ಉತ್ತಮ ಪ್ರದರ್ಶನ ತೋರಿದ್ದರು.
ಬದಲಿ ಆಟಗಾರರು: ಜೋಶ್ ಹ್ಯಾಜಲ್‌ವುಡ್ ಅನುಪಸ್ಥಿತಿಯಲ್ಲಿ ಇಬ್ಬರು ಹೊಸ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಲಾಗುತ್ತಿದೆ. ಸೀನ್ ಅಬಾಟ್ ಮತ್ತು ಡಾಗೆಟ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ ನಡೆಯುತ್ತಿರುವ ಪ್ರೈಮ್ ಮಿನಿಸ್ಟರ್ ಇಲೆವೆನ್ ಅಭ್ಯಾಸ ಪಂದ್ಯದಲ್ಲಿ ಬೋಲ್ಯಾಂಡ್ ಕೂಡ ಆಸೀಸ್ ತಂಡದಲ್ಲಿದ್ದಾರೆ.