ಬಿಹಾರ: 'ಹೆಣ್ಮಕ್ಳೇ ಸ್ಟ್ರಾಂಗ್' ಎಂಬುದನ್ನೂ ಭಾರತ ಮಹಿಳಾ ಹಾಕಿ ತಂಡ ಸಾಬೀತು ಮಾಡಿತು. ಇಲ್ಲಿ ಬುಧವಾರ ನಡೆದ ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಚೀನಾ ಮಹಿಳಾ ತಂಡವನ್ನು 1-0 ಯಿಂದ ಬಗ್ಗುಬಡಿದು ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ಚಾಂಪಿಯನ್ ಆಯಿತು.
ಯುವ ಸ್ಟ್ರೈಕರ್ ದೀಪಿಕಾ ಅವರ ರಿವರ್ಸ್ ಹಿಟ್ ಗೋಲಿನಿಂದ ದಾಖಲಾದ ಏಕೈಕ ಗೋಲಿನಿಂದ ಭಾರತ ತಂಡ ಜಯದ ಕೇಕೆ ಹಾಕಿತು. ದೀಪಿಕಾ ಅವರು 31ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಂಡು ಗೋಲು ಬಾರಿಸುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟರು. ಜೊತೆಗೆ ಪಂದ್ಯಾವಳಿಯಲ್ಲಿ 11 ಗೋಲು ಗಳಿಸುವ ಮೂಲಕ ಅತ್ಯಧಿಕ ಸ್ಕೋರರ್ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಲೀಗ್ ಹಂತದಲ್ಲೂ ಭಾರತ ಮಹಿಳೆಯರು ಚೀನಾವನ್ನು 3-0 ಗೋಲುಗಳ ಅಂತರದಿಂದ ಸೋಲಿಸಿದ್ದರು. ಭಾರತಕ್ಕೆ ಇದು ಮೂರನೇ ಎಟಿಸಿ ಪ್ರಶಸ್ತಿಯಾಗಿದೆ. 2016 ಮತ್ತು 2023 ರಲ್ಲಿ ಟ್ರೋಫಿ ಗೆಲುವು ಸಾಧಿಸಿತ್ತು. ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕಿಳಿದಿದ್ದ ತಂಡ ಸತತ ಎರಡನೇ ಮತ್ತು ಒಟ್ಟಾರೆ ಮೂರನೇ ಪ್ರಶಸ್ತಿ ಬಾಚಿಕೊಂಡಿತು.
ಎಸಿಟಿ ಟೂರ್ನಿಯಲ್ಲಿ ಭಾರತ ಮತ್ತು ಕೊರಿಯಾ ತಂಡಗಳು ಮಾತ್ರ ತಲಾ ಮೂರು ಮೂರು ಬಾರಿ ಪ್ರಶಸ್ತಿ ವಿಜೇತವಾಗಿದೆ. ಚೀನಾ ಮೂರನೇ ಬಾರಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.