ಬೆಳಗಾವಿ: ಒಂದು ಕಾಲದಲ್ಲಿ ಕರಾಟೆ ಜಪಾನ್, ಚೀನಾ ಮುಂತಾದ ದೇಶಗಳಿಗೆ ಸೀಮಿತವಾಗಿತ್ತು. ಈಗ ಭಾರತದಲ್ಲೂ ಜನಪ್ರಿಯವಾಗಿದೆ. ಇಲ್ಲಿನ ಕರಾಟೆಪಟುಗಳು ದೇಶ-ವಿದೇಶಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾರೆ. ಇತ್ತೀಚೆಗೆ ಉಜ್ಬೇಕಿಸ್ತಾನದಲ್ಲಿ ನಡೆದ ವಿಶ್ವ ಕರಾಟೆ ಚಾಂಪಿಯನಶಿಪ್ನಲ್ಲಿ ಬೆಳಗಾವಿ ಜಿಲ್ಲೆಯ ಮಾಜಿ ಸೈನಿಕರೊಬ್ಬರ ಪುತ್ರಿ ಚಿನ್ನದ ಪದಕ ಜಯಿಸಿದ್ದು ಇದಕ್ಕೆ ಹೊಸ ಉದಾಹರಣೆ.
ತಾಷ್ಕೆಂಟ್ನಲ್ಲಿ ನವೆಂಬರ್ 5, 6 ಮತ್ತು 7ರಂದು ಆಯೋಜಿಸಿದ್ದ 9ನೇ ಇಂಟರ್ನ್ಯಾಶನಲ್ ಮಾರ್ಷಿಯಲ್ ಆರ್ಟ್ಸ್ ಗೇಮ್ಸ್ನಲ್ಲಿ ಗೋಕಾಕ್ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದ ಯುವತಿ ವೈಷ್ಣವಿ ಶಿವನಗೌಡ ನಿರ್ವಾಣಿ ಅವರು ಚಿನ್ನದ ಪದಕ ಗೆದ್ದಿದ್ದಾರೆ.
ವಿಶ್ವ ಕರಾಟೆ ಚಾಂಪಿಯನಶಿಪ್ ಫೆಡರೇಷನ್ ಆಯೋಜಿಸಿದ್ದ ಈ ಗೇಮ್ಸ್ನ 16-17ನೇ ವಯಸ್ಸಿನ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ವೈಷ್ಣವಿ, 20 ದೇಶಗಳ ಕರಾಟೆಪಟುಗಳ ನಡುವೆ ಪ್ರಥಮ ಸ್ಥಾನ ಪಡೆದಿದ್ದಾರೆ.
ವೈಷ್ಣವಿ ಅವರ ತಂದೆ ಶಿವನಗೌಡ ನಿರ್ವಾಣಿ ಮಾಜಿ ಸೈನಿಕ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಬೆಂಗಳೂರಿನ ರೇವಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ (ವಿಜ್ಞಾನ) ಓದುತ್ತಿರುವ ವೈಷ್ಣವಿ, 9ನೇ ವಯಸ್ಸಿನಿಂದ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಈಗಾಗಲೇ ಬೆಂಗಳೂರು, ಮೈಸೂರು, ದೆಹಲಿ, ಚೆನ್ನೈ, ಹರಿಯಾಣ, ಕುರುಕ್ಷೇತ್ರ, ಗೋವಾದಲ್ಲಿ ನಡೆದ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.