ಅಮೆರಿಕ : ಮೈಕ್ ಟೈಸನ್ ಮತ್ತು ಜೇಕ್ ಪೌಲ್ ನಡುವಿನ ಬಾಕ್ಸಿಂಗ್ ಪಂದ್ಯಕ್ಕೂ ಮುನ್ನ ಭಾರತದ ನೀರಜ್ ಗೋಯತ್ ಅದೇ ವೇದಿಕೆಯಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಈವೆಂಟ್ನಲ್ಲಿ ನಡೆದ ಬಾಕ್ಸಿಂಗ್ ಪಂದ್ಯದಲ್ಲಿ ನೀರಜ್ ಬ್ರೆಜಿಲ್ ಬಾಕ್ಸರ್ನನ್ನು ಬಗ್ಗುಬಡಿದಿದ್ದಾರೆ.
ಜೇಕ್ಸ್ ಪೌಲ್ ಮತ್ತು ಮೈಕ್ ಟೈಸನ್ ನಡುವಿನ ಮೆಗಾ ಫೈಟ್ಗೂ ಮೊದಲು 3 ಅಂಡರ್ ಕಾರ್ಡ್ ಪಂದ್ಯಗಳು ನಡೆದಿದ್ದವು. ಇವುಗಳಲ್ಲಿ 33 ವರ್ಷದ ಭಾರತೀಯ ಬಾಕ್ಸರ್ ನೀರಜ್ ಗೋಯತ್ 6 ಸುತ್ತಿನ ಸೂಪರ್ ಮಿಡಲ್‌ವೇಟ್-ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಪಂದ್ಯದಲ್ಲಿ ಬ್ರೆಜಿಲಿಯನ್ ಯೂಟ್ಯೂಬರ್ ಮತ್ತು ಹಾಸ್ಯನಟ ವಿಂಡರ್ಸನ್ ನ್ಯೂನ್ಸ್ ಅವರನ್ನು ಸೋಲಿಸುವ ಮೂಲಕ ದಾಖಲೆ ಬರೆದಿದ್ದಾರೆ. 6 ಸುತ್ತುಗಳ ಕಠಿಣ ಸ್ಪರ್ಧೆಯಲ್ಲಿ ಭಾರತೀಯ ಬಾಕ್ಸರ್ 60-54 ಅಂತರದಿಂದ ಗೆಲುವು ಸಾಧಿಸಿದ್ದಾರೆ.
ನೀರಜ್ ಗೋಯತ್ ಹರಿಯಾಣ ಮೂಲದವರಾಗಿದ್ದು, ಭಾರತೀಯ ಬಾಕ್ಸರ್ ಆಗಿ ಹಲವು ದಾಖಲೆ ಬರೆದಿದ್ದಾರೆ. ಹರಿಯಾಣದ ಬೇಗಂಪುರದಲ್ಲಿ ಜನಿಸಿದ ಇವರು 2006ರಲ್ಲಿ 10ನೇ ತರಗತಿಯಲ್ಲಿದ್ದಾಗಲೇ ಬಾಕ್ಸಿಂಗ್ ಪ್ರಾರಂಭಿಸಿದ್ದರು. ಅವರು ಮಾಜಿ ವಿಶ್ವ ಹೆವಿವೇಯ್ಟ್ ಚಾಂಪಿಯನ್ ಮೈಕ್ ಟೈಸನ್ ಅವರನ್ನು ತಮ್ಮ ಆರಾಧ್ಯ ದೈವವೆಂದು ಪರಿಗಣಿಸಿ ಬಾಕ್ಸಿಂಗ್ ಆರಂಭಿಸಿದ್ದರು.