ಹೈದರಾಬಾದ್ : ಹಾಂಗ್ ಕಾಂಗ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಮೆಂಟ್ನ ಪುರುಷರ ಡಬಲ್ಸ್ ಸೆಮಿಫೈನಲ್ನಲ್ಲಿ ಭಾರತದ ತಾರಾ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಸೋಲನುಭವಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಎಂಟನೇ ಶ್ರೇಯಾಂಕದ ಮಲೇಷ್ಯಾದ ಮ್ಯಾನ್ ವೀ ಚೊಂಗ್ ಮತ್ತು ಟೀ ಕೈ ವೂನ್ ವಿರುದ್ಧ 41 ನಿಮಿಷಗಳ ಕಾಲ ನಡೆದ ರೋಚಕ ಪಂದ್ಯದಲ್ಲಿ ವಿಶ್ವದ ಆರನೇ ಶ್ರೇಯಾಂಕದ ಭಾರತೀಯ ಜೋಡಿ 18-21, 19-21 ನೇರ ಗೇಮ್ಗಳಿಂದ ಪರಾಭವಗೊಂಡಿತು.
ಮೊದಲ ಗೇಮ್ನ ಆರಂಭದಿಂದಲೂ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. 4-4, 7-7 ಮತ್ತು 10-10ರಲ್ಲಿ ಸಮಬಲದ ಹೋರಾಟ ಕಂಡುಬಂದರೂ, ವಿರಾಮದ ವೇಳೆಗೆ ಮಲೇಷ್ಯಾ ಜೋಡಿ ಅಲ್ಪ ಮುನ್ನಡೆ ಸಾಧಿಸಿತು. ಸಾತ್ವಿಕ್ ಮತ್ತು ಚಿರಾಗ್ ಪ್ರಬಲ ಪ್ರತಿರೋಧ ಒಡ್ಡಿದರಾದರೂ, ಅಂತಿಮವಾಗಿ ಮಲೇಷ್ಯಾ ಆಟಗಾರರು 21-18 ಅಂತರದಿಂದ ಮೊದಲ ಗೇಮ್ ವಶಪಡಿಸಿಕೊಂಡರು.
ಎರಡನೇ ಗೇಮ್ನಲ್ಲಿ ಉತ್ತಮ ಆರಂಭ ಪಡೆದ ಭಾರತೀಯ ಜೋಡಿ 7-3ರ ಮುನ್ನಡೆ ಗಳಿಸಿತು. ಆದರೆ, ಸತತ ಆರು ಅಂಕಗಳನ್ನು ಕಲೆಹಾಕಿದ ಮಲೇಷ್ಯಾ ಜೋಡಿ 9-7ರ ಮುನ್ನಡೆ ಸಾಧಿಸಿ ಪಂದ್ಯದ ಗತಿಯನ್ನು ಬದಲಿಸಿತು. ಬಳಿಕ 14-9ಕ್ಕೆ ಮುನ್ನಡೆ ಹೆಚ್ಚಿಸಿಕೊಂಡ ಮಲೇಷ್ಯಾ ವಿರುದ್ಧ ಸಾತ್ವಿಕ್-ಚಿರಾಗ್ ಭರ್ಜರಿ ಪುನರಾಗಮನ ಮಾಡಿ 19-19ರಲ್ಲಿ ಸಮಬಲ ಸಾಧಿಸಿದರು. ಆದರೂ, ನಿರ್ಣಾಯಕ ಹಂತದಲ್ಲಿ ಮೇಲುಗೈ ಸಾಧಿಸಿದ ಮಲೇಷ್ಯಾ ಜೋಡಿ 21-19 ಅಂತರದಿಂದ ಗೇಮ್ ಹಾಗೂ ಪಂದ್ಯವನ್ನು ತನ್ನದಾಗಿಸಿಕೊಂಡಿತು.
ಇದಕ್ಕೂ ಮುನ್ನ, ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಭಾರತದ ಅನುಭವಿ ಆಟಗಾರ ಕಿದಂಬಿ ಶ್ರೀಕಾಂತ್ ಅವರು ವಿಶ್ವದ ಮೂರನೇ ಶ್ರೇಯಾಂಕದ ಥೈಲ್ಯಾಂಡ್ನ ಕುನ್ಲಾವುಟ್ ವಿಟ್ಟಿಡಾಸೋರ್ನ್ ವಿರುದ್ಧ 17-21, 7-21 ನೇರ ಗೇಮ್ಗಳಿಂದ ಸೋಲನುಭವಿಸಿದರು. ಮಹಿಳಾ ಸಿಂಗಲ್ಸ್ನಲ್ಲಿ ಥೈಲ್ಯಾಂಡ್ನ ಐದನೇ ಶ್ರೇಯಾಂಕದ ಪೋರ್ನ್ಪಾವಿ ಚೋಚುವಾಂಗ್ ಅವರನ್ನು ಮಣಿಸಿ ಗಮನ ಸೆಳೆದಿದ್ದ ರಕ್ಷಿತಾ ರಾಮರಾಜ್, ಕ್ವಾರ್ಟರ್ ಫೈನಲ್ನಲ್ಲಿ ಚೀನಾದ ಎರಡನೇ ಶ್ರೇಯಾಂಕದ ಚೆನ್ ಯು ಫೀ ವಿರುದ್ಧ 18-21, 22-24 ಅಂತರದಿಂದ ವೀರೋಚಿತ ಸೋಲು ಕಂಡು ಟೂರ್ನಿಯಲ್ಲಿ ತಮ್ಮ ಸ್ಮರಣೀಯ ಅಭಿಯಾನವನ್ನು ಅಂತ್ಯಗೊಳಿಸಿದರು.