ಹೈದರಾಬಾದ್ : ಯುಎಇ ವಿರುದ್ಧದ 2026ರ ಏಷ್ಯಾಕಪ್ ಗ್ರೂಪ್ A ಪಂದ್ಯದಲ್ಲಿ ಭಾರತದ ಯುವ ಬ್ಯಾಟರ್, ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಭರ್ಜರಿ 160 ರನ್ (168 ಎಸೆತ) ಸಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅಭಿಮಾನಿಗಳು ಅವರಲ್ಲಿ ಸೆಹ್ವಾಗ್ ಅವರ ಆಕ್ರಮಣಕಾರಿ ಶೈಲಿಯನ್ನು ನಿರೀಕ್ಷಿಸುತ್ತಿರುವಾಗಲೇ, ಆರ್ಯವೀರ್ ನೀಡಿದ ಹೇಳಿಕೆಯೊಂದು ಕ್ರಿಕೆಟ್ ಅಂಗಳದಲ್ಲಿ ಸಂಚಲನ ಮೂಡಿಸಿದೆ. ಪ್ರಚಾರದ ವಿಡಿಯೋ ಒಂದರಲ್ಲಿ ಮಾತನಾಡಿದ 19 ವರ್ಷದ ಆರ್ಯವೀರ್, "ನಾನು ಸೆಹ್ವಾಗ್ನಂತೆ ಆಡಲು ಬಯಸಲ್ಲ, ವಿರಾಟ್ ಕೊಹ್ಲಿ ಥರ ಆಡಲು ಬಯಸುತ್ತೇನೆ" ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಮೊದಲ ಎಸೆತದಿಂದಲೇ ಸಿಕ್ಸರ್, ಬೌಂಡರಿ ಬಾರಿಸುವ ತಂದೆಯ ನಿರ್ಭೀತ ಆಟಕ್ಕೆ ಭಿನ್ನವಾಗಿ, ಆರ್ಯವೀರ್ ತಮ್ಮ ಇನ್ನಿಂಗ್ಸ್ನಲ್ಲಿ ಕೊಹ್ಲಿ ಮಾದರಿಯ ಪ್ರಬುದ್ಧತೆ ಮತ್ತು ಸ್ಥಿರತೆಯನ್ನು ಪ್ರದರ್ಶಿಸಿದರು. ಯುಎಇ ವಿರುದ್ಧದ ಪಂದ್ಯದಲ್ಲಿ ಆರಂಭದಲ್ಲಿ ಅತ್ಯಂತ ತಾಳ್ಮೆಯಿಂದ ಆಡಿ 131 ಎಸೆತಗಳಲ್ಲಿ ಶತಕ ಪೂರೈಸಿದ ಅವರು, ನಂತರ ಕ್ರೀಸ್ನಲ್ಲಿ ಗೇರ್ ಬದಲಾಯಿಸಿ ಬಿರುಸಿನ ಆಟಕ್ಕಿಳಿದರು. 37ನೇ ಓವರ್ ಒಂದರಲ್ಲೇ ಎರಡು ಸಿಕ್ಸರ್ ಹಾಗೂ ಎರಡು ಬೌಂಡರಿ ಬಾರಿಸಿದ ಆರ್ಯವೀರ್, ಒಟ್ಟಾರೆಯಾಗಿ 17 ಬೌಂಡರಿ ಮತ್ತು 7 ಅತ್ಯಕರ್ಷಕ ಸಿಕ್ಸರ್ಗಳ ನೆರವಿನಿಂದ 160 ರನ್ ಕಲೆಹಾಕಿದರು. ತಂದೆಯ ಆಕ್ರಮಣಕಾರಿ ಮನೋಭಾವದ ಜೊತೆಗೆ ಕೊಹ್ಲಿಯಂತೆ ಇನ್ನಿಂಗ್ಸ್ ಕಟ್ಟುವ ಕಲೆಯನ್ನು ರೂಢಿಸಿಕೊಂಡಿರುವ ಆರ್ಯವೀರ್, ಭಾರತೀಯ ಕ್ರಿಕೆಟ್ನ ಭವಿಷ್ಯದ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ.