ಗೋವಾ : ಸಂಸದ ತೇಜಸ್ವಿ ಸೂರ್ಯ ಅವರು ಭಾನುವಾರ ಗೋವಾದಲ್ಲಿ ಜರುಗಿದ ಐರನ್‌ಮ್ಯಾನ್ 70.3 ಚಾಲೆಂಜ್ ರೇಸ್ ಜಯಿಸಿದ ದೇಶದ ಮೊದಲ ಜನಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರೇಸ್ನ 2 ಕಿ.ಮೀ ಈಜು, 90 ಕಿ.ಮೀ ಸೈಕ್ಲಿಂಗ್ ಮತ್ತು 21 ಕಿ.ಮೀ ಓಟ ಸೇರಿ ಮೂರು ವಿಭಾಗಗಳಲ್ಲಿ ಅವರು ಭಾಗವಹಿಸಿದ್ದರು.
ಸಂಸದರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದು, ತೇಜಸ್ವಿ ಸೂರ್ಯ 8 ಗಂಟೆ, 27 ನಿಮಿಷ 32 ಸೆಕೆಂಡುಗಳಲ್ಲಿ ಸ್ಪರ್ಧೆಯ ಮೂರು ವಿಭಾಗಗಳನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಐರನ್‌ಮ್ಯಾನ್ 70.3 ಗೋವಾದ ನಾಲ್ಕನೇ ಆವೃತ್ತಿಯನ್ನು ರೇಸ್ನ ರಾಯಭಾರಿ ಮತ್ತು ಟೆನಿಸ್ ದಂತಕಥೆ ಲಿಯಾಂಡರ್ ಪೇಸ್, ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ, ಸಂಸ್ಥಾಪಕ ಮತ್ತು ಸಿಇಒ ಯೋಸ್ಕಾ ಮತ್ತು ಐರನ್‌ಮ್ಯಾನ್ 70.3 ಗೋವಾ ರೇಸ್ ನಿರ್ದೇಶಕ ದೀಪಕ್ ರಾಜ್, ಹರ್ಬಲೈಫ್ ಇಂಡಿಯಾದ ಮಾರ್ಕೆಟಿಂಗ್ ನಿರ್ದೇಶಕ ಗಣೇಶನ್ ವಿ.ಎಸ್. ಅವರು ಭಾನುವಾರ ಮಿರಾಮರ್ ಬೀಚ್‌ನಲ್ಲಿ ಚಾಲನೆ ನೀಡಿದರು.
ಈ ಸಾಧನೆಗಾಗಿ ತೇಜಸ್ವಿ ಸೂರ್ಯ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ''ಶ್ಲಾಘನೀಯ ಸಾಧನೆ! ಇದು ಅನೇಕ ಯುವಕರಿಗೆ ಫಿಟ್‌ನೆಸ್ ಸಂಬಂಧಿತ ಚಟುವಟಿಕೆಯಲ್ಲಿ ಭಾಗವಹಿಸಲು ಪ್ರೇರೇಪಣೆ ಎಂದು ನನಗೆ ಖಾತ್ರಿಯಿದೆ'' ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತಕ್ಕಾಗಿ ಪ್ರಶಸ್ತಿ ಗೆಲ್ಲಲು ತೀವ್ರ ತರಬೇತಿ ಮತ್ತು ಕಠಿಣ ಪರಿಶ್ರಮಪಡುವ ದೇಶದ ಕ್ರೀಡಾಪಟುಗಳಿಗೆ ತಮ್ಮ ಸಾಧನೆಯನ್ನು ಸೂರ್ಯ ಅರ್ಪಿಸಿದರು. ''ದೊಡ್ಡ ಮಹತ್ವಾಕಾಂಕ್ಷೆಗಳನ್ನು ಬೆನ್ನಟ್ಟುತ್ತಿರುವ ಯುವ ರಾಷ್ಟ್ರವಾಗಿ, ನಾವು ನಮ್ಮ ದೈಹಿಕ ಸಾಮರ್ಥ್ಯವನ್ನು ಪೋಷಿಸಬೇಕು ಮತ್ತು ಹೆಚ್ಚು ಆರೋಗ್ಯಕರ ರಾಷ್ಟ್ರವಾಗಬೇಕು. ಫಿಟ್ ಆಗುವ ಪ್ರಯತ್ನದಿಂದ ನಮಗೆ ಹೆಚ್ಚು ಶಿಸ್ತು ಮತ್ತು ಆತ್ಮವಿಶ್ವಾಸ ಮೂಡುತ್ತದೆ. ಅಲ್ಲದೆ, ನೀವು ಕೈಗೊಳ್ಳುವ ಯಾವುದೇ ಉದ್ಯಮದಲ್ಲಿ ಕೂಡ ಯಶಸ್ಸಿಗೆ ಅದು ನೆರವಾಗುತ್ತದೆ'' ಎಂದರು.