ಪುತ್ತೂರು : ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ವಿದ್ಯಾಭಾರತಿ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಡಿಂಪಲ್ ಶೆಟ್ಟಿ ಅವರು 100 ಮೀಟರ್ ಓಟದಲ್ಲಿ ಚಿನ್ನದ ಪದಕ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ದೇಶದ ವಿವಿಧಡೆಯಿಂದ ಆಗಮಿಸಿದ್ದ ಪ್ರತಿಭಾವಂತ ಕ್ರೀಡಾಪಟುಗಳೊಂದಿಗೆ ತೀವ್ರ ಪೈಪೋಟಿ ನಡೆಸಿ ಅವರು ಈ ಸಾಧನೆಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಈ ಭರ್ಜರಿ ಯಶಸ್ಸಿನ ಹಿಂದೆ ವಿದ್ಯಾರ್ಥಿನಿಯ ಪರಿಶ್ರಮದ ಜೊತೆಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಹಾಗೂ ಯತೀಶ್ ಅವರ ವಿಶೇಷ ನೇತೃತ್ವ ಮತ್ತು ತರಬೇತಿ ಪ್ರಮುಖ ಪಾತ್ರ ವಹಿಸಿದೆ. ಗುರುಗಳ ಸೂಕ್ತ ಮಾರ್ಗದರ್ಶನದೊಂದಿಗೆ ಡಿಂಪಲ್ ಶೆಟ್ಟಿ ಅವರು ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರತಿಭೆ ಪ್ರದರ್ಶಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಹೆಸರನ್ನು ಬೆಳಗಿದ ಡಿಂಪಲ್ ಶೆಟ್ಟಿ ಅವರ ಈ ಸಾಧನೆಗೆ ಕಾಲೇಜಿನಲ್ಲಿ ಹರ್ಷೋದ್ಗಾರದ ವಾತಾವರಣ ಮೂಡಿದೆ. ವಿದ್ಯಾರ್ಥಿನಿಯ ಈ ಹೆಮ್ಮೆಯ ಸಾಧನೆಯನ್ನು ಗುರುತಿಸಿ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಹಾಗು ಎಲ್ಲಾ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.