image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹಾಂಗ್ ಕಾಂಗ್ ಸಿಕ್ಸಸ್ 2026: ಆಸೀಸ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಅಫ್ಘಾನಿಸ್ತಾನ

ಹಾಂಗ್ ಕಾಂಗ್ ಸಿಕ್ಸಸ್ 2026: ಆಸೀಸ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಅಫ್ಘಾನಿಸ್ತಾನ

ಹಾಂಗ್ ಕಾಂಗ್ : ಹಾಂಗ್ ಕಾಂಗ್ ಸಿಕ್ಸಸ್ 2026 ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ಅಫ್ಘಾನಿಸ್ತಾನ ತಂಡ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಟೂರ್ನಿಯುದ್ದಕ್ಕೂ ಅದ್ಭುತ ಆಟ ಪ್ರದರ್ಶಿಸಿದ್ದ ಅಫ್ಘಾನ್ ಪಡೆ ಕೊನೆಗೂ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಗುಲ್ಬದಿನ್ ನೈಬ್ ನಾಯಕತ್ವದಲ್ಲಿ ಕಣಕ್ಕಿಳಿದ ಅಫ್ಘಾನಿಸ್ತಾನ ತಂಡ ಬ್ಯಾಟಿಂಗ್‌ನಲ್ಲಿ ಸ್ಫೋಟಕ ಆಟ ಪ್ರದರ್ಶಿಸುವುದರ ಜೊತೆಗೆ ಒತ್ತಡದ ಸಂದರ್ಭಗಳಲ್ಲೂ ಉತ್ತಮ ಪ್ರದರ್ಶನ ನೀಡಿತು. ಮತ್ತೊಂದೆಡೆ, ಟೂರ್ನಿಯುದ್ದಕ್ಕೂ ಉತ್ತಮ ಲಯದಲ್ಲಿದ್ದ ಆಸ್ಟ್ರೇಲಿಯಾ ಫೈನಲ್‌ ಪ್ರವೇಶಿಸಿತ್ತು. ಆದರೆ, ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅಫ್ಘಾನ್ ಪಡೆಯ ಮುಂದೆ ಕಾಂಗರೂಗಳ ಆಟ ನಡೆಯಲಿಲ್ಲ.

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಕೇವಲ ಆರು ಓವರ್‌ಗಳ ಪಂದ್ಯವಾಗಿದ್ದರಿಂದ ಆರಂಭದಿಂದಲೇ ಆಸೀಸ್ ಬ್ಯಾಟರ್‌ಗಳು ಆಕ್ರಮಣಕಾರಿ ಆಟಕ್ಕೆ ಮುಂದಾದರು. ಪರಿಣಾಮವಾಗಿ ಆರು ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 115 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರು. ಈ ಮೂಲಕ ಅಫ್ಘಾನಿಸ್ತಾನಕ್ಕೆ ಗೆಲ್ಲಲು 116 ರನ್‌ಗಳ ಕಠಿಣ ಗುರಿ ನೀಡಿದರು. ತಂಡದ ಪರ ಆರಂಭಿಕ ಆಟಗಾರ ಮ್ಯಾಕ್ಸ್ ಬ್ರ್ಯಾಂಟ್ ಕೇವಲ 14 ಎಸೆತಗಳಲ್ಲಿ 44 ರನ್ ಸಿಡಿಸಿ ಮಿಂಚಿದರು. ಅಲೆಕ್ಸ್ ರಾಸ್ ಕೂಡ ಕೇವಲ 10 ಎಸೆತಗಳಲ್ಲಿ ಅಜೇಯ 29 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

116 ರನ್‌ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ನಂತರ ಕ್ರೀಸ್‌ಗೆ ಬಂದ ಇಮ್ರಾನ್ ಮಿರ್ ಮತ್ತು ಫರ್ಮಾನುಲ್ಲಾ ಸಫಿ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನ ಹಾದಿಗೆ ಮರಳಿಸಿದರು. ಇಮ್ರಾನ್ ಮಿರ್ ಕೇವಲ 14 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದ 53 ರನ್ ಸಿಡಿಸಿ ಅಬ್ಬರಿಸಿದರು. ಮತ್ತೊಂದೆಡೆ, ಫರ್ಮಾನುಲ್ಲಾ ಸಫಿ ಕೇವಲ 7 ಎಸೆತಗಳಲ್ಲಿ 4 ಸಿಕ್ಸರ್‌ಗಳ ಸಹಿತ 26 ರನ್ ಗಳಿಸಿದರು. ಈ ಇಬ್ಬರ ಸ್ಫೋಟಕ ಜೊತೆಯಾಟ ಆಸ್ಟ್ರೇಲಿಯಾ ಬೌಲರ್‌ಗಳ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿತು.

ನಾಯಕ ಗುಲ್ಬದಿನ್ ನೈಬ್ ಕೂಡ ಕೇವಲ 6 ಎಸೆತಗಳಲ್ಲಿ 17 ರನ್ ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಅಂತಿಮವಾಗಿ ಅಫ್ಘಾನಿಸ್ತಾನ ಕೇವಲ 5.1 ಓವರ್‌ಗಳಲ್ಲಿ ಗುರಿ ತಲುಪುವ ಮೂಲಕ 5 ಎಸೆತಗಳು ಬಾಕಿ ಇರುವಂತೆಯೇ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಚೊಚ್ಚಲ ಹಾಂಗ್ ಕಾಂಗ್ ಸಿಕ್ಸಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

Category
ಕರಾವಳಿ ತರಂಗಿಣಿ