ಹೈದರಾಬಾದ್: ಪುಣೆಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಕಳಪೆ ಪ್ರದರ್ಶನ ತೋರಿ 113 ರನ್ಗಳಿಂದ ಸೋಲನುಭವಿಸಿ ಸರಣಿ ಸೋತಿದೆ. ಇದರ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ ಹೊರಹಾಕಿದ್ದು 'ಟೆಸ್ಟ್ಗೆ ನಿವೃತ್ತಿ ಘೋಷಿಸಿ' ಎಂದು ಆಗ್ರಹಿಸಿದ್ದಾರೆ.
ತವರಿನಲ್ಲಿ ಸತತ 18 ಟೆಸ್ಟ್ ಸರಣಿಗಳನ್ನು ಗೆದ್ದಿದ್ದ ಭಾರತ 12 ವರ್ಷಗಳ ಬಳಿಕ ಶನಿವಾರ ನ್ಯೂಜಿಲೆಂಡ್ ವಿರುದ್ಧ ಸರಣಿ ಸೋಲು ಕಂಡಿತು. ಇದರೊಂದಿಗೆ ಭಾರತ ನೆಲದಲ್ಲಿ ನ್ಯೂಜಿಲೆಂಡ್ 67 ವರ್ಷಗಳ ಬಳಿಕ ಸರಣಿ ಜಯಿಸಿದೆ.
ಎರಡನೇ ಟೆಸ್ಟ್ನಲ್ಲಿ 359 ರನ್ಗಳ ಸಾಮಾನ್ಯ ಗುರಿ ಪಡೆದಿದ್ದ ಭಾರತ, ಮಿಚೆಲ್ ಸ್ಯಾಂಟ್ನರ್ ಸ್ಪಿನ್ ಬಲೆಗೆ ಬಿದ್ದು ಹೀನಾಯ ಸೋಲು ಅನುಭವಿಸಿತು. ಭಾರತದ ಪರ ಎರಡನೇ ಇನ್ನಿಂಗ್ಸ್ನಲ್ಲಿ ಜೈಸ್ವಾಲ್ (77), ಜಡೇಜಾ (42) ಹೊರತುಪಡಿಸಿ ಯಾರೊಬ್ಬರೂ ಉತ್ತಮ ಪ್ರದರ್ಶನ ನೀಡಲಿಲ್ಲ. ಇದರಿಂದಾಗಿ ಭಾರತ 245 ರನ್ಗಳಿ ಸರ್ವಪತನ ಕಂಡಿತು.
ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ತವರಿನಲ್ಲಿ ನಡೆದ ಟೆಸ್ಟ್ನಲ್ಲಿ ಈ ಇಬ್ಬರು ಬ್ಯಾಟರ್ಗಳು ಕಳಪೆ ಪ್ರದರ್ಶನ ಪ್ರದರ್ಶಿದ ಕಾರಣ ಟೆಸ್ಟ್ಗೆ ನಿವೃತ್ತಿ ಹೇಳಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ನಿಮ್ಮಿಬ್ಬರ ಟೆಸ್ಟ್ ಸಮಯ ಮುಗಿದಿದೆ, ನಿವೃತ್ತಿ ಪಡೆಯುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.