ಜಪಾನ್ : ಜಪಾನ್ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಅತ್ಯ್ಭುತ ಪ್ರದರ್ಶನ ಮುಂದುವರಿಸಿದ್ದು, ಪದಕಗಳ ಸಂಖ್ಯೆಯಲ್ಲಿ ನೂತನ ಇತಿಹಾಸ ಸೃಷ್ಟಿಸಿದ್ದಾರೆ. ಸ್ಪರ್ಧೆಯ ಐದನೇ ದಿನದಂದು ಭಾರತೀಯ ಅಥ್ಲೀಟ್ಗಳು ಭರ್ಜರಿ ಪ್ರದರ್ಶನ ನೀಡಿ ಚಿನ್ನದ ಪದಕಗಳ ಬೇಟೆಯಾಡುವುದರ ಜೊತೆಗೆ ವಿಶ್ವ ದಾಖಲೆಗಳನ್ನು ಮುರಿದರು.
ಪುರುಷರ 400 ಮೀಟರ್ಸ್ T64 ವಿಭಾಗದಲ್ಲಿ ಸಂದೀಪ್ ಕುಮಾರ್ 52.28 ಸೆಕೆಂಡುಗಳಲ್ಲಿ ಗುರಿ ತಲುಪಿ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ಇದೇ ಸ್ಪರ್ಧೆಯಲ್ಲಿ ಅಜಯ್ ಕುಮಾರ್ (53.61 ಸೆ.) ಕಂಚಿನ ಪದಕ ಪಡೆದರು. ಮತ್ತೊಂದೆಡೆ, ಪುರುಷರ ಜಾವೆಲಿನ್ ಥ್ರೋ F37/38 ಸ್ಪರ್ಧೆಯಲ್ಲಿ ಹನಿ ಅವರು 60.49 ಮೀಟರ್ ದೂರ ಎಸೆದು ಹೊಸ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಮಹಿಳೆಯರ SL3-SU5 ಡಬಲ್ಸ್ ಬ್ಯಾಡ್ಮಿಂಟನ್ ಫೈನಲ್ನಲ್ಲಿ ತುಳಸಿಮತಿ ಮುರುಗೇಶನ್ ಹಾಗೂ ಮಾನಸಿ ಜೋಶಿ ಜೋಡಿಯು ಚೀನಾದ ಆಟಗಾರ್ತಿಯರನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿತು.
ಈ ಅದ್ಭುತ ಗೆಲುವುಗಳೊಂದಿಗೆ ಭಾರತೀಯ ತಂಡವು 100 ಪದಕಗಳ ಗಡಿಯನ್ನು ಯಶಸ್ವಿಯಾಗಿ ದಾಟಿತು. ಪ್ಯಾರಾ ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಆರ್ಚರಿ ಹಾಗೂ ಶೂಟಿಂಗ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಭಾರತೀಯ ಕ್ರೀಡಾಪಟುಗಳು ನಿರಂತರವಾಗಿ ಪದಕಗಳನ್ನು ಬಾಚಿಕೊಳ್ಳುವ ಮೂಲಕ ದೇಶದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದ್ದಾರೆ.