ಏಷ್ಯನ್ ಪ್ಯಾರಾ ಗೇಮ್ಸ್ನ ಆರನೇ ದಿನವಾದ ಬುಧವಾರ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, ಪದಕಗಳ ಬೇಟೆಯನ್ನು ಯಶಸ್ವಿಯಾಗಿ ಮುಂದುವರಿಸಿದ್ದಾರೆ. ಪುರುಷರ ಹೈಜಂಪ್ನ T44/64 ವಿಭಾಗದಲ್ಲಿ ಭಾರತದ ಪ್ರವೀಣ್ ಕುಮಾರ್ ಅವರು 2.05 ಮೀಟರ್ ಎತ್ತರ ಜಿಗಿಯುವ ಮೂಲಕ ಗೇಮ್ಸ್ ದಾಖಲೆ ಬರೆದು ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಇದೇ ಸ್ಪರ್ಧೆಯಲ್ಲಿ ಭಾರತದ ಬಂಟಿ ಅವರು 1.92 ಮೀಟರ್ ಎತ್ತರ ಜಿಗಿದು ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಬೆಳ್ಳಿ ಪದಕ ಗೆದ್ದುಕೊಂಡರು. ಉಜ್ಬೇಕಿಸ್ತಾನದ ತೆಮುರ್ಬೆಕ್ ಗಿಯಾಜೋವ್ 1.86 ಮೀಟರ್ ಸಾಧನೆಯೊಂದಿಗೆ ಮೂರನೇ ಸ್ಥಾನ ಪಡೆದು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಶಾಟ್ಪುಟ್ ವಿಭಾಗದಲ್ಲಿ ಸಚಿನ್ ಖಿಲಾರಿ ಅವರು ಚಿನ್ನದ ಪದಕ ಗೆದ್ದು ಮಿಂಚಿದರೆ, ಕೃಷ್ಣ ಮತ್ತು ಶಿವರಾಜನ್ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡರು. ಇದಲ್ಲದೆ, ಮಹಿಳೆಯರ ಕಾಂಪೌಂಡ್ ಡಬಲ್ಸ್ ಬಿಲ್ಬುಗಾರಿಕೆ (ಆರ್ಚರಿ) ವಿಭಾಗದಲ್ಲಿ ಶೀತಲ್ ದೇವಿ ಮತ್ತು ಪಾಯಲ್ ನಾಗ್ ಜೋಡಿಯು ಚಿನ್ನದ ಪದಕಕ್ಕಾಗಿ ಚೀನಾದ ಸ್ಪರ್ಧಿಗಳನ್ನು ಎದುರಿಸಲಿದ್ದಾರೆ. ಪುರುಷರ ವಿಭಾಗದಲ್ಲಿ ತೋಮನ್ ಕುಮಾರ್ ಮತ್ತು ಶ್ಯಾಮ್ ಸುಂದರ್ ಸ್ವಾಮಿ ಕಂಚಿನ ಪದಕಕ್ಕಾಗಿ ಸೆಣಸಾಡಲಿದ್ದಾರೆ.
ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ಆಯುಷ್ ವರ್ಮಾ, ಸುಜಿತ್ ಮಂಡಲಕುನ್ನತ್, ಭಾಗ್ಯಶ್ರೀ ಜಾದವ್ ಮತ್ತು ಪ್ರೀತಿ ಪಾಲ್ ಅವರ ಪ್ರದರ್ಶನದ ಮೇಲೆ ಭಾರೀ ನಿರೀಕ್ಷೆಯಿದೆ. ಮಹಿಳೆಯರ 67 ಕೆಜಿ ಪವರ್ಲಿಫ್ಟಿಂಗ್ ಫೈನಲ್ನಲ್ಲಿ ಕಸ್ತೂರಿ ರಾಜಮಣಿ ಹಾಗೂ ಈಜು ಸ್ಪರ್ಧೆಯಲ್ಲಿ ವೈಷ್ಣವಿ ವಿನೋದ್ ಜಗತಾಪ್ ಮತ್ತು ದೇವಾಂಶಿ ಸತಿಜಾ ಅವರು ಪದಕಕ್ಕಾಗಿ ಕಣಕ್ಕಿಳಿಯಲಿದ್ದಾರೆ.
ಪ್ಯಾರಾ ಅಥ್ಲೆಟಿಕ್ಸ್, ಬಿಲ್ಬುಗಾರಿಕೆ, ಈಜು, ಪವರ್ಲಿಫ್ಟಿಂಗ್, ಸೈಕ್ಲಿಂಗ್, ಬ್ಯಾಡ್ಮಿಂಟನ್, ಜೂಡೋ, ಟೇಬಲ್ ಟೆನ್ನಿಸ್ ಮತ್ತು ಬೊಚ್ಚಿಯಾ ಕ್ರೀಡೆಗಳ ವಿವಿಧ ವಿಭಾಗಗಳಲ್ಲಿ ಭಾರತದ ಕ್ರೀಡಾಪಟುಗಳು ಸ್ಪರ್ಧಿಸುತ್ತಿದ್ದು, ಮುಂಬರುವ ದಿನಗಳಲ್ಲಿ ದೇಶದ ಪದಕಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.