ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಖ್ಯ ಆಯ್ಕೆಗಾರರ ಹುದ್ದೆಗೆ ಮುಂಚೂಣಿಯಲ್ಲಿದ್ದ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್, ಆರ್ಥಿಕ ಕಾರಣಗಳಿಂದಾಗಿ ಕೊನೆಯ ಕ್ಷಣದಲ್ಲಿ ರೇಸ್ನಿಂದ ಹಿಂದೆ ಸರಿದಿದ್ದಾರೆ. ಐಪಿಎಲ್ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ತರಬೇತುದಾರರಾಗಿ ಮತ್ತು ಖಾಸಗಿ ಚಾನೆಲ್ ಕಾಮೆಂಟೇಟರ್ ಆಗಿ ವಾರ್ಷಿಕ 7 ರಿಂದ 9 ಕೋಟಿ ರೂ. ಗಳಿಸುತ್ತಿರುವ ಅವರು, ಬಿಸಿಸಿಐ ನೀಡುವ 3 ಕೋಟಿ ರೂ. ಸಂಬಳಕ್ಕಾಗಿ ಈ ಆದಾಯವನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಹಿತಾಸಕ್ತಿ ಸಂಘರ್ಷದ ಕಠಿಣ ನಿಯಮಗಳು ಹಾಗೂ ಭಾರೀ ಆದಾಯ ನಷ್ಟದ ಕಾರಣದಿಂದ ಅವರು ಅರ್ಜಿ ಸಲ್ಲಿಸಿಲ್ಲ. ಈ ಬೆಳವಣಿಗೆಯ ಬೆನ್ನಲ್ಲೇ ರವಿಚಂದ್ರನ್ ಅಶ್ವಿನ್ ಸೇರಿದಂತೆ ಹಲವು ಕ್ರಿಕೆಟಿಗರು ಆಯ್ಕೆ ಸಮಿತಿಯ ಸಂಬಳ ರಚನೆಯನ್ನು ಮರುಪರಿಶೀಲಿಸುವಂತೆ ಬಿಸಿಸಿಐ ಅನ್ನು ಒತ್ತಾಯಿಸಿದ್ದಾರೆ. ಪ್ರಸ್ತುತ ವೆಸ್ಟ್ ಝೋನ್ ಕೋಟಾದಡಿ ವಾಸಿಂ ಜಾಫರ್ ಮತ್ತು ರಮೇಶ್ ಪವಾರ್ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿದ್ದು, ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯು ಯುವ ಹಾಗೂ ಅನುಭವಿ ಮಾಜಿ ಆಟಗಾರರನ್ನು ಸೆಳೆಯಲು ಸಂಭಾವನೆಯನ್ನು ಹೆಚ್ಚಿಸುವುದು ಅನಿವಾರ್ಯ ಎಂಬ ಚರ್ಚೆ ಕ್ರಿಕೆಟ್ ವಲಯದಲ್ಲಿ ತೀವ್ರಗೊಂಡಿದೆ.