image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಐಚಿ-ನಗೋಯಾ ಏಷ್ಯನ್ ಗೇಮ್ಸ್‌ಗೆ ಭವ್ಯ ತೆರೆ: 85 ಪದಕಗಳೊಂದಿಗೆ 4ನೇ ಸ್ಥಾನ ಪಡೆದ ಭಾರತ

ಐಚಿ-ನಗೋಯಾ ಏಷ್ಯನ್ ಗೇಮ್ಸ್‌ಗೆ ಭವ್ಯ ತೆರೆ: 85 ಪದಕಗಳೊಂದಿಗೆ 4ನೇ ಸ್ಥಾನ ಪಡೆದ ಭಾರತ

ಐಚಿ-ನಗೋಯಾ : ಜಪಾನಿನ ಐಚಿ-ನಗೋಯಾ ನಗರದಲ್ಲಿ ಎರಡು ವಾರಕ್ಕೂ ಅಧಿಕ ಸಮಯದಿಂದ ನಡೆದ 20ನೇ ಆವೃತ್ತಿಯ ಏಷ್ಯನ್ ಕ್ರೀಡಾಕೂಟವು ರವಿವಾರ ಭವ್ಯ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿದೆ. ಏಷ್ಯ ಒಲಿಂಪಿಕ್ಸ್ ಮಂಡಳಿಯ (ಒಸಿಎ) ಅಧ್ಯಕ್ಷ ಶೇಕ್ ಜೋಯಾನ್ ಬಿನ್ ಹಮದ್ ಅಲ್ ಥಾನಿ ಅವರು ಮಿಝುಹೊ ಪಾರ್ಕ್‌ನಲ್ಲಿ ಕ್ರೀಡಾಕೂಟ ಅಧಿಕೃತವಾಗಿ ಕೊನೆಗೊಂಡಿದೆ ಎಂದು ಘೋಷಿಸಿದರು. 'ಒನ್ ಏಷ್ಯ' ಧ್ವೇಯವಾಕ್ಯದೊಂದಿಗೆ ನಡೆದ ಸಮಾರೋಪ ಸಮಾರಂಭದಲ್ಲಿ ಸಾವಿರಾರು ಕ್ರೀಡಾಪಟುಗಳು, ಅಧಿಕಾರಿಗಳು ಹಾಗೂ ಪ್ರೇಕ್ಷಕರು ಭಾಗವಹಿಸಿದ್ದರು. ಇದೇ ವೇಳೆ 2030ರ ಮುಂದಿನ ಆವೃತ್ತಿಯ ಆತಿಥ್ಯಕ್ಕಾಗಿ ಖತರ್‌ನ ದೋಹಾ ನಗರಕ್ಕೆ ಏಷ್ಯನ್ ಗೇಮ್ಸ್ ಧ್ವಜ ಹಾಗೂ ಬ್ಯಾಟನ್ ಹಸ್ತಾಂತರಿಸಲಾಯಿತು. ಖತರ್ 2006ರ ನಂತರ ಎರಡನೇ ಬಾರಿಗೆ ಏಷ್ಯನ್ ಗೇಮ್ಸ್ ಆತಿಥ್ಯ ವಹಿಸಲು ಸಜ್ಜಾಗಿದೆ. ಸಮಾರೋಪ ಸಮಾರಂಭದಲ್ಲಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದ ಭಾರತದ ಶೂಟಿಂಗ್ ತಾರೆ ನೀರೂ ಧಾಂಡಾ ಧ್ವಜಧಾರಣಿಯಾಗಿ ಭಾರತೀಯ ಅಥ್ಲೀಟ್‌ಗಳ ತಂಡವನ್ನು ಮುನ್ನಡೆಸಿದರು.

ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತವು 21 ಚಿನ್ನ, 27 ಬೆಳ್ಳಿ ಹಾಗೂ 37 ಕಂಚಿನ ಪದಕಗಳ ಸಹಿತ ಒಟ್ಟು 85 ಪದಕಗಳನ್ನು ಗೆದ್ದು ಪದಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. ಗರಿಷ್ಠ ಬೆಳ್ಳಿ ಪದಕಗಳನ್ನು ಗೆದ್ದ ಆಧಾರದಲ್ಲಿ ಉಜ್ಬೇಕಿಸ್ತಾನ್ (21 ಚಿನ್ನ) ತಂಡವನ್ನು ಹಿಂದಿಕ್ಕಿದ ಭಾರತವು 4ನೇ ಸ್ಥಾನಕ್ಕೇರಿತು. ಚೀನಾ, ಜಪಾನ್ ಹಾಗೂ ದಕ್ಷಿಣ ಕೊರಿಯಾ ನಂತರದ ಸ್ಥಾನದಲ್ಲಿದ್ದು, ಶೂಟಿಂಗ್, ಅಥ್ಲೆಟಿಕ್ಸ್, ಬಾಕ್ಸಿಂಗ್, ಹಾಕಿ ಮುಂತಾದ ಕ್ರೀಡೆಗಳಲ್ಲಿ ಭಾರತ ಪ್ರಮುಖ ಪ್ರದರ್ಶನ ನೀಡಿದೆ. ಚಿನ್ನದ ಪದಕ ವಿಜೇತ ಭಾರತದ ಪುರುಷರ ಹಾಕಿ ತಂಡವು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದೆ. 2023ರ ಹಾಂಗ್‌ಝೂ ಗೇಮ್ಸ್‌ನಲ್ಲಿ 106 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತವು ಈ ಬಾರಿಯೂ ತನ್ನ ಸ್ಥಿರತೆಯನ್ನು ಕಾಯ್ದುಕೊಂಡಿದೆಯಾದರೂ, ಕಳೆದ ಬಾರಿಗೆ ಹೋಲಿಸಿದರೆ ಒಟ್ಟು ಪದಕ ಗಳಿಕೆಯಲ್ಲಿ ಕೊಂಚ ಹಿನ್ನಡೆ ಕಂಡಿದೆ.

ಐಚಿ-ನಗೋಯಾ ಗೇಮ್ಸ್‌ನಲ್ಲಿ ದಾಖಲೆಯ 43 ಕ್ರೀಡೆಗಳಲ್ಲಿ 469 ಚಿನ್ನದ ಪದಕಗಳಿದ್ದವು ಹಾಗೂ ಸುಮಾರು 17,000 ಕ್ರೀಡಾಪಟುಗಳು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು. ಮಿಕ್ಸೆಡ್ ಮಾರ್ಷಲ್ ಆರ್ಟ್ಸ್, ಟೆಕ್ಬಾಲ್ ಹಾಗೂ ಸರ್ಫಿಂಗ್ ಕ್ರೀಡೆಗಳು ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಸೇರ್ಪಡೆಗೊಂಡವು. 169 ಚಿನ್ನ ಸೇರಿದಂತೆ ಒಟ್ಟು 341 ಪದಕ ಗೆದ್ದ ಚೀನಾ ತನ್ನ ತವರು ನೆಲದ ಹೊರಗೆ ಭರ್ಜರಿ ಪ್ರದರ್ಶನ ನೀಡಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದರೆ, ಆತಿಥೇಯ ಜಪಾನ್ 83 ಚಿನ್ನ ಸಹಿತ ಒಟ್ಟು 269 ಪದಕಗಳನ್ನು ಗೆದ್ದು 1994ರ ಹಿರೋಶಿಮಾ ಗೇಮ್ಸ್‌ನ ತನ್ನದೇ ದಾಖಲೆಯನ್ನು ಮುರಿದಿದೆ. ಚೀನಾದ ಯುವ ಈಜು ತಾರೆ ಯು ರಿಝಿ ಹಾಗೂ ಏಳು ಬಾರಿ ಚಿನ್ನದ ಪದಕ ವಿಜೇತೆ ರುಆಂಗ್ ರುಆನ್‌ಶು ಸೇರಿದಂತೆ ಹಲವು ಕ್ರೀಡಾಪಟುಗಳು ವೈಯಕ್ತಿಕವಾಗಿ ಅಮೋಘ ಪ್ರದರ್ಶನ ನೀಡಿದರು.

ಮತ್ತೊಂದೆಡೆ, ಈ ಬಾರಿಯ ಏಷ್ಯನ್ ಗೇಮ್ಸ್ ವಸತಿ ಹಾಗೂ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿ ತೀವ್ರ ಟೀಕೆಗೆ ಗುರಿಯಾಯಿತು. ಆಯೋಜಕರು ಕ್ರೀಡಾಪಟುಗಳಿಗೆ ಕ್ರೀಡಾಗ್ರಾಮಗಳನ್ನು ನಿರ್ಮಿಸುವ ಬದಲು ಹೋಟೆಲ್‌ಗಳು ಹಾಗೂ ಕ್ರೂಸ್ ಶಿಪ್‌ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿದ್ದು, ನೋಂದಣಿ ವಿಳಂಬ, ಕೊಠಡಿ ಹಂಚಿಕೆ ಸಮಸ್ಯೆಗಳು, ರಾಜತಾಂತ್ರಿಕ ಹಾಗೂ ಶಿಷ್ಟಾಚಾರದ ಗೊಂದಲಗಳು ಮತ್ತು ಕೆಲವು ತಾಣಗಳಲ್ಲಿ ಪ್ರೇಕ್ಷಕರ ಕೊರತೆ ಕ್ರೀಡಾಕೂಟಕ್ಕೆ ಹಿನ್ನಡೆಯಾಯಿತು. ಜಪಾನ್‌ನ ಈ ಸಂಘಟನಾತ್ಮಕ ಕೊರತೆಗಳು ಮುಂದಿನ ಆವೃತ್ತಿಯ ಗೇಮ್ಸ್‌ಗೆ ದೊಡ್ಡ ಪಾಠವಾಗಲಿವೆ.

Category
ಕರಾವಳಿ ತರಂಗಿಣಿ