ಮಂಗಳೂರು : ಮಂಗಳೂರು ಮೂಲದ WIM ಸನಾ ಓಂ ಪ್ರಕಾಶ್ ಕಯ್ಯಾರ್ ಅವರು ಉಜ್ಬೇಕಿಸ್ತಾನದ ಸಮರ್ಕಂಡ್ನಲ್ಲಿ ನಡೆದ 46ನೇ ಚೆಸ್ ಒಲಿಂಪಿಯಾಡ್ನಲ್ಲಿ ಉಗಾಂಡಾವನ್ನು ಪ್ರತಿನಿಧಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಉಗಾಂಡಾ ತಂಡದ ಬೋರ್ಡ್ 1ರಲ್ಲಿ ಎಲ್ಲಾ 11 ಸುತ್ತುಗಳಲ್ಲೂ ಸ್ಪರ್ಧಿಸಿದ ಸನಾ, 5 ಗೆಲುವು, 5 ಡ್ರಾ ಹಾಗೂ ಕೇವಲ 1 ಸೋಲಿನೊಂದಿಗೆ ಅತ್ಯುತ್ತಮ 7.5/11 ಅಂಕಗಳನ್ನು ಗಳಿಸಿದ್ದಾರೆ. ಈ ಕೂಟದಲ್ಲಿ 2084 Performance Rating ಪಡೆದ ಸನಾ, ತಮ್ಮ Elo ಅಂಕಗಳಲ್ಲಿ 66.4 ಗಳ ಗಮನಾರ್ಹ ಏರಿಕೆ ದಾಖಲಿಸಿದ್ದಾರೆ.
ಪಂದ್ಯಾವಳಿಯಲ್ಲಿ ಸನಾ ಅವರು ಡಿಆರ್ ಕಾಂಗೋ, ಫಿಜಿ, ಕೇಪ್ ವರ್ಡೆ, ಪಾಕಿಸ್ತಾನ ಮತ್ತು ಪ್ಯಾಲೆಸ್ಟೈನ್ ಆಟಗಾರರ ವಿರುದ್ಧ ಗೆಲುವು ಸಾಧಿಸಿದ್ದರೆ, ಲಿಥುವೇನಿಯಾ, ಡೆನ್ಮಾರ್ಕ್ ಹಾಗೂ ಸಿಂಗಾಪುರದ ಬಲಿಷ್ಠ ಅಂತರರಾಷ್ಟ್ರೀಯ ಆಟಗಾರರ ವಿರುದ್ಧ ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ. 2022ರಲ್ಲಿ ಆಫ್ರಿಕನ್ ಯೂತ್ U-14 ವಿಭಾಗದಲ್ಲಿ WCM ಪ್ರಶಸ್ತಿ, 2024ರ ಒಲಿಂಪಿಯಾಡ್ನಲ್ಲಿ WFM ಪ್ರಶಸ್ತಿ ಹಾಗೂ 2025ರ ಆಫ್ರಿಕನ್ ಯೂತ್ U-18 ವಿಭಾಗದಲ್ಲಿ WIM ಪ್ರಶಸ್ತಿ ಗಳಿಸಿದ್ದ ಸನಾ, 2026ರಲ್ಲಿ ಉಗಾಂಡಾ ವುಮೆನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿ ತಮ್ಮ ಸಫಲ ಚೆಸ್ ಪಯಣವನ್ನು ಮುಂದುವರಿಸಿದ್ದಾರೆ.
ತಮ್ಮ ಆರಂಭಿಕ ದಿನಗಳಿಂದಲೂ ಮಂಗಳೂರಿನ ಡೆರಿಕ್ಸ್ ಚೆಸ್ ಸ್ಕೂಲ್ (DCS) ನೊಂದಿಗೆ ಸನಾ ನಿಕಟ ನಂಟು ಹೊಂದಿದ್ದಾರೆ. ಈ ಯಶಸ್ಸಿನ ಕುರಿತು ಸಂತಸ ಹಂಚಿಕೊಂಡಿರುವ ಡೆರಿಕ್ಸ್ ಚೆಸ್ ಸ್ಕೂಲ್ನ ಸಂಸ್ಥಾಪಕ ಡೆರಿಕ್ ಪಿಂಟೋ ಅವರು, "ವಿಶ್ವದ ಪ್ರತಿಷ್ಠಿತ ಚೆಸ್ ಒಲಿಂಪಿಯಾಡ್ ವೇದಿಕೆಯಲ್ಲಿ ಮಂಗಳೂರು ಮೂಲದ ಆಟಗಾರ್ತಿ ಉಗಾಂಡಾವನ್ನು ಪ್ರತಿನಿಧಿಸಿ 7.5/11 ಅಂಕ ಗಳಿಸಿರುವುದು ಡೆರಿಕ್ಸ್ ಚೆಸ್ ಸ್ಕೂಲ್ ಹಾಗೂ ಮಂಗಳೂರಿಗೆ ಅಪಾರ ಹೆಮ್ಮೆಯ ಸಂಗತಿಯಾಗಿದೆ" ಎಂದು ತಿಳಿಸಿ ಸನಾ ಹಾಗೂ ಅವರ ಪೋಷಕರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.