ಜಪಾನ್ : ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಅದ್ಭುತ ಪ್ರದರ್ಶನ ಮುಂದುವರಿಸಿದ್ದು, ಒಂದೇ ದಿನ ಮೂರು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಿಶ್ರ ಟ್ರ್ಯಾಪ್ ಶೂಟಿಂಗ್ ಸ್ಪರ್ಧೆಯಲ್ಲಿ ನೀರು ಧಂಡಾ ಮತ್ತು ಕೈನಾನ್ ಚೆನೈ ಜೋಡಿ ಬಂಗಾರದ ಪದಕ ಗೆಲ್ಲುವುದರೊಂದಿಗೆ ದಿನದ ಮೂರನೇ ಚಿನ್ನ ಭಾರತದ ಖಾತೆಗೆ ಸೇರಿತು. ಇದಕ್ಕೂ ಮುನ್ನ, ಭಾರತೀಯ ಮಹಿಳಾ ತಂಡವು ಕಾಂಪೌಂಡ್ ಆರ್ಚರಿಯಲ್ಲಿ ದಿನದ ಮೊದಲ ಚಿನ್ನ ತಂದುಕೊಟ್ಟರೆ, ಚಿಕಿತಾ ತನಿಪತಿ ಹಾಗೂ ಸಾಹಿಲ್ ರಾಜೇಶ್ ಜಾಧವ್ ಜೋಡಿ ಮಿಶ್ರ ಆರ್ಚರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಎರಡನೇ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿತ್ತು.
ಶೂಟಿಂಗ್ ಫೈನಲ್‌ನಲ್ಲಿ ನೀರು ಧಂಡಾ ಮತ್ತು ಕೈನಾನ್ ಚೆನೈ ಆರಂಭಿಕ ಹಿನ್ನಡೆಯಿಂದ ಅದ್ಭುತವಾಗಿ ಚೇತರಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿದರು. ಮೊದಲ ಸುತ್ತಿನಲ್ಲಿ 10 ರಲ್ಲಿ 6 ಗುರಿ ತಲುಪಿ ಕೊನೆಯ ಸ್ಥಾನದಲ್ಲಿದ್ದ ಭಾರತೀಯ ಜೋಡಿ, ನಂತರದ ಸುತ್ತಿನಲ್ಲಿ ಯಾವುದೇ ಗುರಿ ತಪ್ಪಿಸದೇ ಪೂರ್ಣ ಅಂಕ ಗಳಿಸಿತು. ಫೈನಲ್‌ನಲ್ಲಿ 40 ರಲ್ಲಿ 34 ಅಂಕಗಳನ್ನು ಕಲೆಹಾಕಿದ ಈ ಜೋಡಿ ಹೊಸ ಏಷ್ಯನ್ ದಾಖಲೆ ಬರೆಯಿತು. ಈ ಮೊದಲು ಕತಾರ್ (30 ಅಂಕ) ಹೆಸರಿನಲ್ಲಿದ್ದ ಏಷ್ಯನ್ ದಾಖಲೆಯನ್ನು ಭಾರತ ಮುರಿದಿದೆ. ಈ ಸ್ಪರ್ಧೆಯಲ್ಲಿ ಕತಾರ್‌ನ ಮೊಹಮ್ಮದ್ ಅಲ್-ರುಮಾಹಿ ಮತ್ತು ರೇ ಬಾಸಿಲ್ (32 ಅಂಕ) ಬೆಳ್ಳಿ ಗೆದ್ದರೆ, ಚೀನಾದ ಚಿ ಯಿಂಗ್ ಮತ್ತು ಸನ್ ಯುನಾಂಗ್ (23 ಅಂಕ) ಕಂಚಿನ ಪದಕ ಪಡೆದರು. ನೀರು ಧಂಡಾ ಅವರಿಗೆ ಇದು ಸತತ ಎರಡನೇ ದಿನದ ಚಿನ್ನದ ಪದಕವಾಗಿದೆ.
ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ ಗೆದ್ದಿರುವ ಒಟ್ಟು 9 ಚಿನ್ನದ ಪದಕಗಳಲ್ಲಿ 5 ಪದಕಗಳನ್ನು ಮಹಿಳೆಯರೇ ಗೆದ್ದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಚಿಕಿತಾ ತನಿಪತಿ ಮತ್ತು ನೀರು ಧಂಡಾ ಈ ಆವೃತ್ತಿಯಲ್ಲಿ ತಲಾ ಎರಡು ಚಿನ್ನದ ಪದಕ ಜಯಿಸಿದ್ದಾರೆ. ಪಿಸ್ತೂಲ್, ಶಾಟ್‌ಗನ್ ಮತ್ತು ಆರ್ಚರಿ ಮಿಶ್ರ ತಂಡ ಸ್ಪರ್ಧೆಗಳಲ್ಲಿ ತಲಾ ಮೂರು ಚಿನ್ನ ಹಾಗೂ ಪುರುಷರ ಕಬಡ್ಡಿ ತಂಡ ಒಂದು ಚಿನ್ನದ ಪದಕ ತಂದಿತ್ತಿವೆ. ಈ ವೈಭವದ ಪ್ರದರ್ಶನದಿಂದ ಭಾರತವು 9 ಚಿನ್ನ, 21 ಬೆಳ್ಳಿ ಹಾಗೂ 27 ಕಂಚು ಸೇರಿದಂತೆ ಒಟ್ಟು 57 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಜಿಗಿದಿದೆ. ಭಾರತೀಯ ಪುರುಷರ ಆರ್ಚರಿ ತಂಡವೂ ಫೈನಲ್‌ಗೆ ಪ್ರವೇಶಿಸಿದ್ದು, ಮತ್ತೊಂದು ಚಿನ್ನದ ನಿರೀಕ್ಷೆ ಮೂಡಿಸಿದೆ.