image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸರ್ವಾಂಗಾಸನದಲ್ಲಿ ವಿಶ್ವ ದಾಖಲೆ ಬರೆದ ಆಳ್ವಾಸ್ ವಿದ್ಯಾರ್ಥಿ ಪಿ.ಕೆ. ವಿಕಾಸ್

ಸರ್ವಾಂಗಾಸನದಲ್ಲಿ ವಿಶ್ವ ದಾಖಲೆ ಬರೆದ ಆಳ್ವಾಸ್ ವಿದ್ಯಾರ್ಥಿ ಪಿ.ಕೆ. ವಿಕಾಸ್

ಮೂಡುಬಿದಿರೆ: ಸರ್ವಾಂಗಾಸನವನ್ನು ನಿರಂತರವಾಗಿ ನಿರ್ವಹಿಸಿ ಅಪರೂಪದ ಸಾಧನೆಗೈದ ಮೂಡುಬಿದಿರೆಯ ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಆಂಡ್ ಯೋಗಿಕ್ ಸೈನ್ಸ್ ಸಂಸ್ಥೆಯ ತೃತೀಯ ವರ್ಷದ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪಿ.ಕೆ. ವಿಕಾಸ್ ಅವರಿಗೆ ‘ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ (BWR) ವಿಶ್ವ ದಾಖಲೆ ಮಾನ್ಯತೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದವರಾದ ವಿಕಾಸ್, 5 ನೇ ತರಗತಿಯಿಂದಲೇ ಯೋಗಾಭ್ಯಾಸವನ್ನು ಆರಂಭಿಸಿದ್ದು, ಕಳೆದ 11 ವರ್ಷಗಳಿಂದ ನಿರಂತರವಾಗಿ ಯೋಗಾಭ್ಯಾಸದಲ್ಲಿ ನಿರತರಾಗಿದ್ದಾರೆ. ಸರ್ವಾಂಗಾಸನದ ಪ್ರದರ್ಶನದಲ್ಲಿ ಅವರು ಪ್ರದರ್ಶಿಸಿದ ಸಮತೋಲನ, ದೈಹಿಕ ಸಾಮರ್ಥ್ಯ, ನಮ್ಯತೆ, ಸ್ಥಿರತೆ, ಏಕಾಗ್ರತೆ ಹಾಗೂ ಸಹನಶಕ್ತಿಯನ್ನು ಪರಿಗಣಿಸಿ ಈ ವಿಶ್ವ ದಾಖಲೆಯ ಪ್ರಮಾಣಪತ್ರ ನೀಡಲಾಗಿದೆ.

ಯೋಗ ಕ್ಷೇತ್ರದಲ್ಲಿ ಹಲವಾರು ಪ್ರಮುಖ ಸಾಧನೆಗಳನ್ನು ಮಾಡಿರುವ ವಿಕಾಸ್, 2023, 2024 ಹಾಗೂ 2025 ರಲ್ಲಿ ಬೆಂಗಳೂರಿನಲ್ಲಿ ನಡೆದ ರಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಯೋಗ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. 2022 ರಲ್ಲಿ ನಡೆದ WFF ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಇವರು, 2024 ರಲ್ಲಿ ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಅಲ್ಲದೆ, 2025 ರಲ್ಲಿ ನಡೆದ ಏಯಾನ್ ವೈದ್ಯಕೀಯ ಸಂಸ್ಥೆಯ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, 2021 ರಲ್ಲಿ ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರು. 2017 ಮತ್ತು 2018 ರಲ್ಲೇ ಜಿಲ್ಲಾ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದ ವಿಕಾಸ್, ಸ್ಪರ್ಧೆಗಳಲ್ಲಿ ಸಾಧನೆ ಮಾಡುವುದರ ಜೊತೆಗೆ ಯೋಗ ಸ್ಪರ್ಧೆಗಳ ನಿರ್ಣಾಯಕರಾಗಿಯೂ (ಜಡ್ಜ್) ಸೇವೆ ಸಲ್ಲಿಸುತ್ತಿದ್ದಾರೆ.

Category
ಕರಾವಳಿ ತರಂಗಿಣಿ