ಜಪಾನ್ : ಏಷ್ಯನ್ ಗೇಮ್ಸ್‌ನ ರೋಚಕ ಫೈನಲ್ ಪಂದ್ಯದಲ್ಲಿ ಇರಾನ್ ವಿರುದ್ಧ ತೀವ್ರ ಪೈಪೋಟಿಯ ನಡುವೆಯೂ ಭಾರತ ಮಹಿಳಾ ಕಬಡ್ಡಿ ತಂಡವು 37-34 ಅಂಕಗಳಿಂದ ಗೆದ್ದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಅಂತಿಮ ಕ್ಷಣದವರೆಗೂ ಉಸಿರು ಬಿಗಿಹಿಡಿಯುವಂತೆ ಸಾಗಿದ ಈ ಹಣಾಹಣಿಯಲ್ಲಿ ಭಾರತೀಯ ಆಟಗಾರ್ತಿಯರು ರಕ್ಷಣಾ ವಿಭಾಗದಲ್ಲಿ (ಡಿಫೆನ್ಸ್) ಅದ್ಭುತ ಪ್ರದರ್ಶನ ನೀಡಿ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಪಂದ್ಯದ ಆರಂಭದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಪಡೆ ಮೊದಲಾರ್ಧ ಮುಕ್ತಾಯದ ವೇಳೆಗೆ 22-16 ಅಂಕಗಳಿಂದ ಸ್ಪಷ್ಟ ಮುನ್ನಡೆ ಸಾಧಿಸಿತ್ತು. ಆದರೆ, ದ್ವಿತೀಯಾರ್ಧದ ಅಂತಿಮ ಹಂತದಲ್ಲಿ ಇರಾನ್ ತಂಡ ಭರ್ಜರಿ ಕಂಬ್ಯಾಕ್ ಮಾಡುವ ಮೂಲಕ ಭಾರತದ ಮುನ್ನಡೆಯ ಅಂತರವನ್ನು ಕಡಿಮೆ ಮಾಡಿ ತೀವ್ರ ಒತ್ತಡ ಹೇರಿತು. ಆದರೂ ಭಾರತದ ಆಟಗಾರ್ತಿಯರು ಕೊನೆಯ ಹಂತದಲ್ಲಿ ತಮ್ಮ ರಕ್ಷಣಾ ತಂತ್ರಗಾರಿಕೆಯನ್ನು ಬಿಗಿಗೊಳಿಸಿ ಗೆಲುವನ್ನು ಖಚಿತಪಡಿಸಿಕೊಂಡರು.
ಅಂತಿಮವಾಗಿ ಭಾರತ 37-34 ಅಂಕಗಳಿಂದ ಇರಾನ್ ಪಡೆಯನ್ನು ಮಣಿಸಿ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಕಬಡ್ಡಿ ಚಿನ್ನದ ಪದಕವನ್ನು ಮತ್ತೊಮ್ಮೆ ತನ್ನದಾಗಿಸಿಕೊಂಡಿದೆ. ಈ ಪ್ರಶಸ್ತಿಯೊಂದಿಗೆ ಭಾರತೀಯ ಮಹಿಳಾ ತಂಡವು ಏಷ್ಯನ್ ಗೇಮ್ಸ್ ಕಬಡ್ಡಿಯ ನಾಲ್ಕು ಆವೃತ್ತಿಗಳಲ್ಲಿ ಮೂರು ಬಾರಿ ಚಿನ್ನದ ಪದಕ ಗೆದ್ದಂತಾಗಿದೆ. 2018ರ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಮಾತ್ರ ಇರಾನ್ ವಿರುದ್ಧ ಸೋತು ಭಾರತಕ್ಕೆ ಚಿನ್ನದ ಪದಕ ಕೈತಪ್ಪಿತ್ತು.