ನಗೋಯಾ: ಏಷ್ಯನ್ ಗೇಮ್ಸ್‌ನ ಪುರುಷರ ಡಬಲ್ ಸ್ಕಲ್ಸ್ ರೋಯಿಂಗ್ ವಿಭಾಗದಲ್ಲಿ ಭಾರತದ ರೋಯಿಂಗ್ ಪಟುಗಳಾದ ಸತ್ನಾಮ್ ಸಿಂಗ್ ಮತ್ತು ಸಲ್ಮಾನ್ ಖಾನ್ ಜೋಡಿ ಅದ್ಭುತ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದುಕೊಂಡಿದೆ. ಏಷ್ಯನ್ ಗೇಮ್ಸ್‌ನ ಪುರುಷರ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕ ಇದಾಗಿದೆ.
ರೇಸ್‌ನ ಆರಂಭದಿಂದಲೂ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಜೋಡಿ, 1,500 ಮೀಟರ್‌ಗಳ ವರೆಗೂ ಎರಡನೇ ಸ್ಥಾನದಲ್ಲಿತ್ತು. ಆದರೆ, ಅಂತಿಮ 500 ಮೀಟರ್‌ಗಳಲ್ಲಿ ವೇಗ ಕಡಿಮೆಯಾದ ಕಾರಣ ಮೂರನೇ ಸ್ಥಾನಕ್ಕೆ ಜಾರಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಈ ವಿಭಾಗದಲ್ಲಿ ಚೀನಾದ ಯಿ ಕ್ಸುಡಿ ಮತ್ತು ನೀ ಯಿಡೆ ಜೋಡಿ 6:09.37 ಸಮಯದಲ್ಲಿ ಗುರಿ ತಲುಪಿ ಚಿನ್ನದ ಪದಕ ಪಡೆದುಕೊಂಡರೆ, ಉಜ್ಬೇಕಿಸ್ತಾನ್‌ನ ಪಾವೆಲ್ ಸೊರಿನ್ ಹಾಗೂ ಮೆಖ್ರೋಜ್‌ಬೆಕ್ ಮಮತ್ಕುಲೋವ್ ಜೋಡಿ 6:10.49 ಸಮಯದಲ್ಲಿ ಓಟ ಮುಗಿಸಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿತು.